ಪಿರಿಯಾಪಟ್ಟಣ: ತಾಲೂಕಿನಲ್ಲಿ ಕಾನೂನು ಬಾಹಿರ ಗಣಿಗಾರಿಕೆ ಮತ್ತು ಕ್ರಷರ್ ನಡೆಸುತ್ತಿರುವವರು ಎಷ್ಟೇ ಪ್ರಭಾವಿಯಾದರೂ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ದ್ವಿತೀಯ ತಿಳಿಸಿದರು.
ತಾಲೂಕಿನ ವಿವಿಧೆಡೆಯ ಕಲ್ಲು ಗಣಿಗಾರಿಕೆ ಪ್ರದೇಶ ಹಾಗೂ ಕ್ರಷರ್ ಗಳಿಗೆ ದಿಢೀರ್ ಭೇಟಿ ನೀಡಿ ಅವರು ಮಾತನಾಡಿ, ಪಿರಿಯಾಪಟ್ಟಣ ತಾಲೂಕಿನಲ್ಲಿ ಅಕ್ರಮ ಮತ್ತು ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಯುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದ್ದು, ಇಲಾಖೆ ತಿಳಿಸಿರುವ ಮಾರ್ಗಸೂಚಿಗಿಂತ ಅಕ್ರಮ ಕಂಡು ಬಂದಲ್ಲಿ ಕ್ರಮ ಜರುಗಿಸುವುದಾಗಿ ಹೇಳಿದರು.
ಜಂಟಿ ನಿರ್ದೇಶಕ ಕಚೇರಿಯ ಚಾಲಿತ ದಳದ ಹಿರಿಯ ಭೂ ವಿಜ್ಞಾನಿ ರೈಯ್ಸ್ ಫಾತಿಮಾ ಮಾತನಾಡಿ ಗಣಿಗಾರಿಕೆ ಪ್ರದೇಶವನ್ನು ಡ್ರೋಣ್ ಕ್ಯಾಮೆರಾ ಮೂಲಕ ಸರ್ವೆ ಮಾಡುವುದರಿಂದ ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದರೆ ಅಂತಹವರಿಗೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಪಿರಿಯಾಪಟ್ಟಣ ತಾಲೂಕಿನಲ್ಲಿ ಈಗಾಗಲೇ 27 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಈ ವೇಳೆ ಬೆಟ್ಟದಪುರ, ನಿಲವಾಡಿ, ಕಣಗಾಲು, ಕೆಸುವಿನಕೆರೆ ಸೇರಿದಂತೆ ವಿವಿಧ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಭೂ ವಿಜ್ಞಾನಿಗಳಾದ ಅಮೃತಾ, ಗಿರೀಶ್, ದಿವ್ಯಾ ಇದ್ದರು.