ಮಂಡ್ಯ: ಸರಳ ಜೀವನ ನಡೆಸಲು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ಕೋರಿ ಪ್ರಧಾನಮಂತ್ರಿ, ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದು ಪರಿಹಾರ ಕೊಡಲಾಗದಿದ್ದರೆ ದಯಾಮರಣ ನೀಡಿ ಎಂದು ಬಡ ರೈತನೊಬ್ಬ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಮಳವಳ್ಳಿ ತಾಲೂಕಿನ ಕಿರುಗಾವಲು ಹೋಬಳಿಯ ಹಳ್ಳದಕೊಪ್ಪಲು ಗ್ರಾಮದ ಕೆ.ಪಿ.ಜವರೇಗೌಡ ಪತ್ರ ಬರೆದ ರೈತನಾಗಿದ್ದು, ಈತ ಪತ್ರವನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾತ್ರ ಸಲ್ಲಿಸದೆ ರಾಜ್ಯಪಾಲ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಅವರಿಗೂ ಕಳುಹಿಸಿದ್ದು, ಆ ಪತ್ರದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಸ್ತುತ ಸರ್ಕಾರದ ಸಾಲ ಸೌಲಭ್ಯ ಪಡೆಯಲು ವಿವಿಧ ಇಲಾಖೆಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದು, ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಅಡಮಾನ ಕೇಳುತ್ತಾರೆ, ನಮ್ಮ ಬಳಿ ಯಾವುದೇ ಚರ ಮತ್ತು ಸ್ಥಿರ ಆಸ್ತಿ ಇಲ್ಲದ ಕಾರಣ ಸಾಲಪಡೆಯಲು ಆಗುತ್ತಿಲ್ಲ ಎಂಬ ದುಃಖವನ್ನು ತೋಡಿಕೊಂಡಿದ್ದಾರೆ.
ನಮ್ಮ ಕುಟುಂಬದಲ್ಲಿ 7ಮಂದಿ ಸದಸ್ಯರಿದ್ದು ಇವರಲ್ಲಿ 3ಜನ ಮಕ್ಕಳು ವಿದ್ಯಾಭ್ಯಾಸ ಮಾಡಲು ತುಂಬಾ ತೊಂದರೆಯಾಗುತ್ತಿದೆ. ನನಗೆ ಹತ್ತು ಗುಂಟೆ ಜಮೀನಿದ್ದು ಅನಾರೋಗ್ಯ ಕಾರಣ ನಂಬಿಕೆ ಕ್ರಯ ಮಾಡಿಸಿ ಸಾಲವನ್ನು ಪಡೆದಿದ್ದೆ. ಈ ಸಾಲವು ನನ್ನ ಆರೋಗ್ಯ ಮತ್ತು ಕುಟುಂಬಸ್ಥರ ಜೀವನ ನಿರ್ವಹಣೆಗಾಗಿ ಸಮಗ್ರವಾಗಿ ಬಳಕೆಯಾಗಿತ್ತು ಸಾಲ ತೀರಿಸಿ ಜಮೀನು ಬಿಡಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ ಸದ್ಯಕ್ಕೆ ಈಗ ನಾನು ಹತ್ತು ಲಕ್ಷ ರೂ ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ ಎಂದು ಹೇಳಿದ್ದಾರೆ. ಸತ್ತ ಮೇಲೆ ಪರಿಹಾರ ಕೊಡುವ ಬದಲು ಬದುಕ್ಕಿದ್ದಾಗಲೇ ಜೀವನ ಕಟ್ಟಿಕೊಳ್ಳಲು ನೆರವಾಗುತ್ತದೆ. ಸಂಘಸಂಸ್ಥೆಗಳಲ್ಲಿ ಮನವಿ ಮಾಡಿದ್ದು ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದಿದ್ದಾರೆ
ಬಡ ಕುಟುಂಬದ ಮುಖ್ಯಸ್ಥನಾಗಿ ನಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ನಮ್ಮ ಜೀವನ ನಿರ್ವಹಣೆಗಾಗಿ ಸರ್ಕಾರ ಕೂಡಲೇ ಸಾಲ ತೀರಿಸಿ, ನಮ್ಮ ಜಮೀನನ್ನು ನಮಗೆ ಕೊಡಿಸಿಕೊಟ್ಟು ನಮ್ಮ ರಕ್ಷಣೆ ಮಾಡುವಂತೆ ಕೋರಿದ್ದಾರೆ, ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಕೊನೆಯದಾಗಿ ನಮ್ಮ ಮಕ್ಕಳು ಮತ್ತು ನನಗೆ ದಯಾಮರಣ ನೀಡಬೇಕೆಂದು ಮನವಿ ಮಾಡಿದ್ದಾರೆ.