ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಬಾಲ್ಯವಿವಾಹ ಮಾಡಿದ್ದಲ್ಲದೆ, ಅತ್ಯಾಚಾರ ಎಸಗಿದ ಆರೋಪ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯವು ಆರೋಪಿಗಳಿಬ್ಬರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಲಕ್ಷ 20 ಸಾವಿರ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ರಾಮಾಪುರ ಪೊಲೀಸ್ ಠಾಣೆಯ ಸರಹದ್ದಿನ ಪಿ.ಬಿ.ದೊಡ್ಡಿ ಗ್ರಾಮದ ಚಲುವ ಅಲಿಯಾಸ್ ಸೆಲ್ವಾ, ಮುತ್ತು ಅಲಿಯಾಸ್ ಮುತ್ತುರಾಜು ಎಂಬ ಆರೋಪಿಗಳೇ ಜೈಲು ಶಿಕ್ಷೆಗೊಳಗಾದವರು. ಚೆಲುವ ಎಂಬಾತ ತಮ್ಮದೇ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ. ಆ ನಂತರ ಚೆಲುವ ಮತ್ತು ಮುತ್ತು ಸೇರಿ ಆಕೆಯನ್ನು 2016 ರ ಜೂನ್ 13 ರಂದು ಮನೆಯಿಂದ ಅಪಹರಿಸಿಕೊಂಡು ಕೊಳ್ಳೇಗಾಲಕ್ಕೆ ಹೋಗಿದ್ದರು. ಅಲ್ಲಿಂದ ಬಸ್ ಮೂಲಕ ತಮಿಳುನಾಡಿನ ನೀಲಗಿರಿ ಜಿಲ್ಲೆಯ (ಊಟಿ) ಕೂನೂರು ತಾಲೂಕಿನ ಗರೆನ್ಸಿ ಗ್ರಾಮದಲ್ಲಿರುವ ಪರಿಚಯಿತರ ಮನೆಗೆ ಕರೆದುಕೊಂಡು ಹೋಗಿ ತಾವು ದಂಪತಿಗಳೆಂದು ಸುಳ್ಳು ಹೇಳಿ ಅಲ್ಲೇ ಉಳಿದಿದ್ದರು. ನಂತರ 2016 ರ ಜೂನ್ 15 ರಂದು ಅಲ್ಲಿಯೇ ಇದ್ದ ಶ್ರೀ ಮುನೇಶ್ವರ ದೇವಾಲಯಕ್ಕೆ ಕರೆದುಕೊಂಡು ಹೋಗಿ ಬಾಲ್ಯ ವಿವಾಹವಾಗಿದ್ದಲ್ಲದೆ ಬಳಿಕ ಪರಿಚಯಿತರ ಮನೆಗೆ ತೆರಳಿ ಅಲ್ಲಿಯೇ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು.
ಇತ್ತ ಅಪ್ರಾಪ್ತ ಬಾಲಕಿಯ ತಂದೆ ಅಪಹರಣದ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಗೋವಿಂದರಾಜುರವರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಅವರ ವಿರುದ್ಧ ಸಾಕ್ಷಿ ಸಹಿತ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸದಾಶಿವ ಎಸ್ ಸುಲ್ತಾನ್ ಪುರಿ ಅವರು ಆರೋಪ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಅಂತಿಮ ತೀರ್ಪು ಪ್ರಕಟಿಸಿದ್ದು, ಆರೋಪಿಗಳಿಬ್ಬರಿಗೂ 10 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಲಕ್ಷ 20 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.