NewsKarnataka
Monday, October 04 2021

ತುಮಕೂರು

ತುಮಕೂರು ವಿವಿ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಸ್ನಾತಕ ಪದವಿ ಜಾರಿ

    ತುಮಕೂರು : ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯವು ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಾಲ್ಕು ವರ್ಷಗಳ ಸ್ನಾತಕ ಪದವಿಯನ್ನ ಅನುಷ್ಠಾನಗೊಳಿಸುತ್ತಿದೆ. ಪ್ರವೇಶ ಪ್ರಕ್ರಿಯೆಯು ಇದೇ ತಿಂಗಳ 23ರಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಆನರ್ಸ್ ಪದವಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬಹುಶಿಸ್ತೀಯ ಮೌಲ್ಯಾಧಾರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವ ಸ್ನಾತಕ ಪದವಿಯ ಈ ಹೊಸ ಮಾದರಿಯು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳಿಗೆ ಯುವತಲೆಮಾರನ್ನು ಸಿದ್ಧಪಡಿಸುವ ಉದ್ದೇಶ ಹೊಂದಿದೆ. ಬಹುಹಂತದ ಪ್ರವೇಶ ಹಾಗೂ ನಿರ್ಗಮನದ ಅವಕಾಶ ಇರುವುದು ಈ ಪದವಿಯ ವೈಶಿಷ್ಟ್ಯವಾಗಿದೆ.

ಪದವಿಯ ಮೊದಲ ವರ್ಷ ಪೂರೈಸಿದ ಬಳಿಕ ಅನಿವಾರ್ಯವಾಗಿ ವ್ಯಾಸಂಗ ಮುಂದುವರಿಸಲಾಗದ ಪರಿಸ್ಥಿತಿ ಬಂದರೆ ಅಂತಹ ವಿದ್ಯಾರ್ಥಿ ‘ಸರ್ಟಿಫಿಕೇಟ್‌ಅನ್ನು ಪಡೆಯುತ್ತಾನೆ/ಳೆ. ಎರಡನೇ ವರ್ಷದ ಅಂತ್ಯದಲ್ಲಿ ಕೋರ್ಸ್ ಬಿಡುವ ಪರಿಸ್ಥಿತಿ ಬಂದರೆ ‘ಡಿಪ್ಲೊಮಾ’ವನ್ನು ಮೂರನೇ ವರ್ಷ ಪೂರೈಸಿದರೆ ಪದವಿ ಹಾಗೂ ನಾಲ್ಕು ವರ್ಷದ ಅಧ್ಯಯನ ಪೂರ್ಣಗೊಳಿಸಿದರೆ ಆನರ್ಸ್ ಪದವಿಯನ್ನು ಪಡೆಯುತ್ತಾನೆ/ಳೆ.

ಕೋರ್ಸ್ ಮಧ್ಯೆ ವ್ಯಾಸಂಗ ನಿಲ್ಲಿಸಿದ ವಿದ್ಯಾರ್ಥಿ ಮತ್ತೆ ಅಲ್ಲಿಂದಲೇ ವ್ಯಾಸಂಗ ಮುಂದುವರಿಸುವುದಕ್ಕೆ ಅವಕಾಶವಿದೆ. ನಾಲ್ಕು ವರ್ಷಗಳ ಆನರ್ಸ್ ಪದವಿಯನ್ನು ಪಡೆದ ವಿದ್ಯಾರ್ಥಿ ನೇರವಾಗಿ ಪಿಎಚ್.ಡಿ. ಅಧ್ಯಯನಕ್ಕೆ ಪ್ರವೇಶ ಪಡೆಯಬಹುದಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಲೆ ಹಾಗೂ ವಾಣಿಜ್ಯ ವಿಷಯಗಳನ್ನು ಓದುವುದಕ್ಕೂ, ಕಲಾ ವಿಭಾಗದ ವಿದ್ಯಾರ್ಥಿ ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳನ್ನು ಓದುವುದಕ್ಕೂ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಉಳಿದೆರಡು ವಿಭಾಗಗಳ ವಿಷಯಗಳನ್ನು ಓದುವುದಕ್ಕೂ ಈ ಮಾದರಿಯಲ್ಲಿ ಅವಕಾಶವಿದೆ.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಕರ್ನಲ್ (ಪ್ರೊ.) ವೈ. ಎಸ್ ಸಿದ್ದೇಗೌಡ ಅವರು ಸಮಾಜವಿಜ್ಞಾನ ವಿಷಯಗಳ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಗಳ ಚೌಕಟ್ಟನ್ನು ರೂಪಿಸುವ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ಸಮರ್ಥ ನೇತೃತ್ವದಲ್ಲಿ ತುಮಕೂರು ವಿವಿ ವ್ಯಾಪ್ತಿಯಲ್ಲಿ ಹೊಸ ಮಾದರಿಯ ಪದವಿಯ ಪರಿಣಾಮಕಾರಿ ಅನುಷ್ಠಾನಕ್ಕೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೊಸ ಪದವಿ ವ್ಯವಸ್ಥೆಗೆ ಅನುಗುಣವಾಗಿ ರಾಜ್ಯಮಟ್ಟದಲ್ಲಿ ವಿವಿಧ ವಿಷಯ ಪರಿಣತರ ಸಮಿತಿಗಳು ಪಠ್ಯಕ್ರಮವನ್ನು ರೂಪಿಸುತ್ತಿವೆ. ಸಮಾನಾಂತರವಾಗಿ, ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿಗಳು ಕಾರ್ಯತತ್ಪರವಾಗಿ ಪಠ್ಯಕ್ರಮಗಳನ್ನು ಯೋಜಿಸಲು ಸೂಚಿಸಲಾಗಿದೆ.

ಈಗಾಗಲೇ ತುಮಕೂರು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಹಲವಾರು ಸುತ್ತಿನ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ತಾಲೂಕು ಕೇಂದ್ರಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಕಳಿಸಿ ಆಯಾ ಪ್ರದೇಶದ ಕಾಲೇಜುಗಳಿಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದೆ. ಎಲ್ಲ ಡೀನರುಗಳ  ನೇತೃತ್ವದಲ್ಲಿ ಅನುಷ್ಠಾನದ ಟಾಸ್ಕ್ಫೋರ್ಸ್ ಇದೆ. ನಾಲ್ಕು ವರ್ಷಗಳ ಆನರ್ಸ್ ಪದವಿಯ ವಿಶೇಷ ಲಕ್ಷಣಗಳನ್ನು ಪರಿಚಯಿಸುವ ವೀಡಿಯೋವನ್ನು ವಿವಿ ನಿರ್ಮಿಸಿದ್ದು, ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಕಾಲೇಜು ಹಂತದಲ್ಲಿ ಈ ಕೆಳಗಿನ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವವಿದ್ಯಾನಿಲಯವು ಕಾಲೇಜುಗಳಿಗೆ ಸೂಚಿಸಿದೆ;

  • ವಿದ್ಯಾರ್ಥಿಗಳನ್ನು ಈ ಹಿಂದಿನಂತೆಯೇ ಕಾಲೇಜುಗಳಲ್ಲಿ ದಾಖಲಾತಿ ಮಾಡಿ ಪ್ರವೇಶದ ವಿವರಗಳನ್ನು ಮುಂದೆ ಯುಯುಪಿಸಿಎಂಎಸ್ ತಂತ್ರಾಂಶದಲ್ಲಿ ದಾಖಲಿಸುವುದು.
  • ಪ್ರತೀ ಕಾಲೇಜಿನಲ್ಲಿಯೂ ಹೆಲ್ಪಡೆಸ್ ಅನ್ನು ಸ್ಥಾಪಿಸಿ, ಸೂಕ್ತ ಸಂಪರ್ಕ ಸಂಖ್ಯೆಯನ್ನು ಒದಗಿಸುವುದು, ಬಿಎ/ಬಿಎಸ್ಸಿ ಪದವಿಗಳಿಗೆ ಯಾವುದಾದರೂ ಎರಡು ಪ್ರಧಾನ ವಿಷಯಗಳನ್ನು ಹಾಗೂ ಒಂದು ಮುಕ್ತ ಆಯ್ಕೆಯ ಪತ್ರಿಕೆಯನ್ನು ಆಯ್ದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವುದು.
  • ಕಾಲೇಜುಗಳಲ್ಲಿ ಈಗಾಗಲೇ ಇರುವ ಪ್ರದೇಶ ಸಂಖ್ಯೆಯ ಶೇ. 20 ಸೀಟುಗಳನ್ನು ಹೆಚ್ಚುವರಿಯಾಗಿ ನೀಡುವುದು.
  •  ಶುಲ್ಕವನ್ನು ವಿ.ವಿ. ನೀಡಿರುವ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳಿಂದ ಪಾವತಿಸಿಕೊಳ್ಳುವುದು.
  • ಈ ಬಗ್ಗೆ ತೆಗೆದುಕೊಂಡ ನಿರ್ಣಯಗಳನ್ನು ವಿಶ್ವವಿದ್ಯಾನಿಲಯಕ್ಕೆ ತಿಳಿಸುವುದು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!