ಬೆಂಗಳೂರು: ಎಲ್ಲ ಸರ್ಕಾರಿ ಶಾಲೆಗಳಿಗೆ ಸೆಪ್ಟೆಂಬರ್ 15ರೊಳಗೆ ಪಠ್ಯ ಪುಸ್ತಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
‘ಕೋವಿಡ್ ಕಾರಣದಿಂದ ಸರ್ಕಾರಿ ಮುದ್ರಣಾಲಯಗಳಲ್ಲಿ ಪೂರ್ಣ ಪ್ರಮಾಣದ ಚಟುವಟಿಕೆ ನಡೆದಿರಲಿಲ್ಲ. ಆದರೂ, ಈಗಾಗಲೇ ಶೇಕಡ 50ಕ್ಕಿಂತ ಹೆಚ್ಚು ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಪೂರೈಸಲಾಗಿದೆ. ಈವರೆಗೆ ಶೇ 70ಕ್ಕಿಂತ ಹೆಚ್ಚು ಪುಸ್ತಕಗಳ ಮುದ್ರಣ ಮುಗಿದಿದೆ. ಸೆ.15ರೊಳಗೆ ಎಲ್ಲ ಶಾಲೆಗಳಿಗೂ ಪಠ್ಯ ಪುಸ್ತಕಗಳನ್ನು ಪೂರೈಸುವ ಗುರಿ ಹೊಂದಲಾಗಿದೆ’ ಎಂದರು.
ಉಚಿತ ವಿತರಣೆ ಮತ್ತು ಮಾರಾಟಕ್ಕಾಗಿ 5.34 ಕೋಟಿ ಪಠ್ಯ ಪುಸ್ತಕಗಳು ಬೇಕಿವೆ. ಈಗಾಗಲೇ 3.78 ಕೋಟಿ ಪುಸ್ತಕಗಳ ಮುದ್ರಣ ಮುಗಿದಿದ್ದು, 2.92 ಕೋಟಿ ಪುಸ್ತಕಗಳನ್ನು ಶಾಲೆಗಳಿಗೆ ಪೂರೈಸಲಾಗಿದೆ. ಉಳಿದ ಪುಸ್ತಕಗಳ ಮುದ್ರಣವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.