ಹುಬ್ಬಳ್ಳಿ: ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ದೊಡ್ಡದು. ಯುವಕರಲ್ಲಿ ವಿದ್ಯೆ, ವ್ಯಕ್ತಿತ್ವ ನಿರ್ಮಾಣ ಮಾಡುವುದು ಸಂಸ್ಥೆ, ಸರ್ಕಾರಗಳ ಜವಾಬ್ದಾರಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಗೆ, ಸಮಾಜಕ್ಕೆ ಉತ್ತಮ ಮಾನವ ಸಂಪನ್ಮೂಲವಾಗಿ ಕೊಡುಗೆಗಳನ್ನು ಮರಳಿ ನೀಡಬೇಕು.
ಕೆಎಲ್‌ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜು ವಿವಿಧ ಬಹು ಅಧ್ಯಯನ ಶಿಸ್ತುಗಳಲ್ಲಿ ಮಾದರಿಯಾಗಿ ರೂಪುಗೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಮಹಾವಿದ್ಯಾಲಯದ 75ನೇ ವರ್ಷ ಚಾರಣೆಯ ಮತ್ತು ಕೆಎಲ್ಇ ಟೆಕ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು. ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲಾ ರಂಗಗಳಲ್ಲಿ ಇಂದು ಆರ್ ಆ್ಯಂಡ್ ಡಿ ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅದಕ್ಕೆ ಹೆಚ್ಚು ಮಹತ್ವ ನೀಡಿ,ಕೈಗಾರಿಕೆ,ಕೃಷಿ,ಆಹಾರ ರಂಗದಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದೆ.
ಹೊಸ ಆರ್ ಆ್ಯಂಡ್ ಡಿ ನೀತಿ ರಚನೆಗೆ ಕಾರ್ಯಪಡೆ ಅಧ್ಯಕ್ಷರನ್ನಾಗಿ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಉಪಕುಲಪತಿ ಡಾ.ಅಶೋಕ ಶೆಟ್ಟರ್ ಅವರನ್ನು ನೇಮಿಸಲು ಚಿಂತನೆ ನಡೆದಿದೆ. ಬಿವಿಬಿ ಎಂಜಿಜಿನಿಯರಿಂಗ್ ಕಾಲೇಜಿನ ಕೆಎಲ್‌ಇ ಟೆಕ್‌ಪಾರ್ಕಿನ ಅಭಿವೃದ್ಧಿಗೆ ಅಗತ್ಯವಾಗಿರುವ ಇನ್ನೂ 2 ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಕ್ರೋಢೀಕರಿಸಿ ನೀಡಲಾಗುವುದು.
ಸ್ಟಾರ್ಟ್ ಅಪ್‌ಗಳ ಉತ್ತೇಜನಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಪ್ರಾದೇಶಿಕ ಕೇಂದ್ರ ಪಾರಂಭಿಸಲಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಮಾತನಾಡಿ, ಇದೇ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಹಾಗೂ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ , ಸಂಸ್ಥೆಯ ಹಳೆಯ ವಿದ್ಯಾರ್ಥಿಗಳೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರನ್ನು ಸನ್ಮಾನಿಸಲಾಯಿತು.
ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ್ ಪಾಟೀಲ ಮುನೇನಕೊಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.