
ಮಡಿಕೇರಿ: ಮಡಿಕೇರಿಯ ಸಂತ ಮೈಕಲರ ಶಾಲಾ ಮತಗಟ್ಟೆಯಲ್ಲಿ 27 ನೇ ಚುನಾವಣೆಯಲ್ಲೂ ಮೊದಲ ಮತದಾರರಾಗಿ ಹಿರಿಯ ರಾಜಕಾರಣಿ, ಕೆಪಿಸಿಸಿಯ ಹಿರಿಯ ಉಪಾಧ್ಯಕ್ಷರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ ತಮ್ಮ ಮತ ಚಲಾಯಿಸಿದರು.
27 ಚುನಾವಣೆಗಳಲ್ಲಿಯೂ ಮಿಟ್ಟು ಚಂಗಪ್ಪ ಮತದಾನ ಕೇಂದ್ರದಲ್ಲಿ ಮೊದಲ ಮತದಾರರಾಗಿ ಹಕ್ಕು ಚಲಾಯಿಸಿರುವುದು ವಿಶೇಷ.
ಮತದಾನ ಹಬ್ಬದಂತೆ, ಈ ಉತ್ಸವವನ್ನು ಮತದಾರರಾಗಿ ಸಂಭ್ರಮಿಸಬೇಕು ಎಂಬ ಹಿನ್ನೆಲೆಯಲ್ಲಿ ಬೆಳಗ್ಗೆ 6.40 ಗಂಟೆಗೆ ನಗರದ ಸಂತಮೈಕಲರ ಶಾಲಾ ಮತಗಟ್ಟೆಗೆ ಪತ್ನಿ ಯಶಿ ಚಂಗಪ್ಪ ಅವರೊಂದಿಗೆ ಬಂದು ಸಾಲಿನಲ್ಲಿ ಮೊದಲಿಗರಾಗಿ ನಿಂತುಕೊಂಡ ಮಿಟ್ಟು ಚಂಗಪ್ಪ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಿರುವಂತೆಯೇ ಮೊದಲು ತಮ್ಮ ಮತ ಹಾಕಿದರು.
ಮತಗಟ್ಟೆಯಲ್ಲಿ ಮೊದಲ ಮತದಾರನಾಗಿ ಸತತ 27 ಚುನಾವಣೆಗಳಲ್ಲಿಯೂ ಮತ ಹಾಕುತ್ತಿರುವುದು ಮನಸ್ಸಿಗೆ ಖುಷಿಕೊಟ್ಟಿದೆ. ಇಂದಿನ ದಿನಗಳಲ್ಲಿ ಅನೇಕರಿಗೆ ಮತದಾನ ಎಂದರೆ ಜಿಗುಪ್ಸೆಯಿದೆ. ಆದರೆ ಮತದಾನ ಅತ್ಯಂತ ಮುಖ್ಯವಾದದ್ದು. ಹೀಗಾಗಿ ನಾನು ಹಿರಿಯ ನಾಗರಿಕನಾಗಿಯೇ ಮತದಾನದ ಬಗ್ಗೆ ಇಷ್ಟೊಂದು ಆಸಕ್ತನಾಗಿರುವಾಗ ಯುವಕ, ಯುವತಿಯರು ಮತದಾನದ ಮೂಲಕ ಮಹತ್ವದ ಕ್ಷಣವನ್ನು ಸಂಭ್ರಮಿಸಬೇಕು ಎಂದು ಮಿಟ್ಟು ಚಂಗಪ್ಪ ಅಭಿಪ್ರಾಯಪಟ್ಟರು.
ಜೂನಿಯರ್ ಕಾಲೇಜ್ ಮತಗಟ್ಟೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಮತ ಚಲಾವಣೆ
ಮಡಿಕೇರಿ ನಗರದ ಜೂನಿಯರ್ ಕಾಲೇಜ್ ಆವರಣದಲ್ಲಿರುವ ಮತಗಟ್ಟೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಮತ ಚಲಾಯಿಸಿದರು. ಬೆಳಗ್ಗೆ ಪತ್ನಿ ಕುಂತಿ ಬೋಪಯ್ಯರೊಂದಿಗೆ ಆಗಮಿಸಿದ ಬೋಪಯ್ಯ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಸತತ ಮೂರು ಬಾರಿ ಶಾಸಕರಾಗಿರುವ ಅವರು ಈ ಬಾರಿ ಕೂಡ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಮಾಯಮುಡಿ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ ಅವರು ಮಾಯಮುಡಿ ಗ್ರಾ.ಪಂ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ತಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಮತಗಟ್ಟೆಗೆ ಆಗಮಿಸಿದ ಅರುಣ್ ಮಾಚಯ್ಯ ತಮ್ಮ ಹಕ್ಕನ್ನು ಚಲಾಯಿಸಿದರು. ನಂತರ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಎಂಎಲ್ಸಿ ವೀಣಾಅಚ್ಚಯ್ಯ ಮತದಾನ
ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕಿ ವೀಣಾಅಚ್ಚಯ್ಯ ಅವರು ಮಡಿಕೇರಿ ನಗರದ ಎವಿ ಶಾಲೆ ಆವರಣದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಮತದಾನ ಮಾಡಿದ ಮಾಜಿ ಎಂಎಲ್ಸಿ ಎಂ.ಸಿ.ನಾಣಯ್ಯ
ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಸಿ.ನಾಣಯ್ಯ ಅವರು ಮಡಿಕೇರಿ ನಗರದ ಸಂತ ಮೈಕಲರ ಶಾಲೆಯ ಆವರಣದ ಮತಗಟ್ಟೆಯಲ್ಲಿ ಮತದಾನ ಮಾಡಿದರು.