ಬಾಗಲಕೋಟೆ : ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ ವಿಷಯದಲ್ಲಿ ಸಚಿವ ಗೋವಿಂದ ಕಾರಜೋಳ ಅವರ ಪಾತ್ರವಿಲ್ಲ. ಸುಖಾಸುಮ್ಮನೇ ಅವರ ಹೆಸರು ತಳಕು ಹಾಕುವುದು ಸರಿಯಲ್ಲ. 1994 ರಲ್ಲಿ ವಿ.ಪ ಸದಸ್ಯ ಆರ್.ಬಿ.ತಿಮ್ಮಾಪುರ ರೈತರ ಸಹಕಾರಿ ಸಂಸ್ಥೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಂಡಿದ್ದರು. ಅದಕ್ಕೆ ತಡೆ ನೀಡಿ ಕಾರ್ಖಾನೆ ಅಸ್ತಿತ್ವಕ್ಕೆ ಕಾರಣರಾದವರು ಗೋವಿಂದ ಕಾರಜೋಳ ಅವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರು ತಿಮ್ಮಾಪುರಗೆ ತಿರುಗೇಟು ನೀಡಿದರು.
ಆರ್ ಬಿ ತಿಮ್ಮಾಪುರಗೆ ತಿರುಗೇಟು ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ
Photo Credit :
ಸಚಿವ ಗೋವಿಂದ ಕಾರಜೋಳ ರಾಜ್ಯ, ದೇಶದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿದ ರಾಜಕಾರಣಿ ಎನ್ನುವ ಹೆಸರು ಪಡೆದುಕೊಂಡಿದ್ದಾರೆ. ಮುಧೋಳ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾಪೂರವನ್ನು ಹರಿಸಿದ್ದಾರೆ. ಸಚಿವರಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಪಕ್ಷಾತೀತವಾಗಿ ಗೌರವ ಪಡೆದುಕೊಂಡಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕೆಲವರು ಸತ್ಯಾಂಶವಿಲ್ಲದೆ ಆರೋಪ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರನ್ನ ಕಾರ್ಖಾನೆ ಸಹಕಾರಿ ಕ್ಷೇತ್ರಕ್ಕೆ ಸೇರಿದೆ. ಚುನಾಯಿತ ಆಡಳಿತ ಮಂಡಳಿ ಇರುವ ಕಾರಣಕ್ಕೆ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎನ್ನುವುದು ಗೊತ್ತಿದ್ದರು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮೋಸದ ದಾರಿಯ ಮೂಲಕ ಕಾರಜೋಳ ಅವರ ಹೆಸರನ್ನು ವಿನಾಕಾರಣ ಎಳೆದು ತರುತ್ತಿದ್ದಾರೆ. ಕ್ಷೇತ್ರದ ಜನತೆ ಅವರ 30 ವರ್ಷ ರಾಜಕೀಯ ನೋಡಿದ್ದಾರೆ. ಕಳೆದ 20 ವರ್ಷಗಳಿಂದ ಕಾರ್ಖಾನೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಬೇರೆಯವರಂತೆ ಖಾಸಗಿ ಕಾರ್ಖಾನೆ ಸ್ಥಾಪಿಸಲಿಲ್ಲ ಎಂದರು.
19 ಸಾವಿರ ಶೇರುದಾರರು ಇರುವ ಕಾರ್ಖಾನೆಯ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು, ನಾಯಕರು ಇದ್ದರು. ಯಾವ ಚುನಾವಣೆಯಲ್ಲಿಯೂ ಗೋವಿಂದ ಕಾರಜೋಳ ಪ್ರಬಾವ ಬೀರಿಲ್ಲ. ಕಾಂಗ್ರೆಸ್ ಪಕ್ಷದ ಹಣಮಂತಗೌಡ ಪಾಟೀಲ, ರಾಜುಗೌಡ ಪಾಟೀಲ, ದಯನಾಂದ ಪಾಟೀಲ, ಶಿವಕುಮಾರ ಮಲಘಾಣ ಕೂಡಾ ಆಯ್ಕೆಯಾಗಿ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಸರ್ವ ಸಾಧಾರಣಾ ಸಭೆಯಲ್ಲಿ ಲಾಭ-ನಷ್ಟದ ಚರ್ಚೆ ನಡೆದಿದೆ. ಹಣಕಾಸು ವ್ಯವಹಾರಕ್ಕೆ ಅನುಮೋದನೆ ನೀಡುತ್ತಾ ಬಂದಿದ್ದಾರೆ. ಆಗ ನೆನಪಾಗದ ಗೋವಿಂದ ಕಾರಜೋಳ ಅವರು ಇದೀಗ ಗೂಬೆ ಕುರಿಸುವುದು ಎಷ್ಟು ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ ಮಾತನಾಡಿ, ವಿಧಾನ ಪರಿಷತ್ತ ಸದಸ್ಯ ಆರ್.ಬಿ.ತಿಮ್ಮಾಪುರ ಮೂರು ಬಾರಿ ಸಚಿವರಾಗಿದ್ದಾರೆ. ಅವರು ಸಕ್ಕರೆ ಸಚಿವರಾಗಿದ್ದರು. ಆ ಎಲ್ಲ ಸಮಯದಲ್ಲಿ ಇದೇ ಆಡಳಿತ ಮಂಡಳಿ ಇತ್ತು. ಅಂದು ತುಟಿಕ್, ಪಿಟಿಕ್ ಅಂತ ಬಾಯಿ ಬಿಡಲಿಲ್ಲ. ಇದೀಗ ಆರೋಪಗಳ ಮಾಡಲು ಮುಂದೆ ಬರುತ್ತಿರುವುದು ನೋಡಿದರೇ ರಾಜಕೀಯ ದುರುದ್ದೇಶ ಅಡಗಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಯಡಹಳ್ಳಿ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಸತ್ಯನಾರಾಯಣ ಹೇಮಾದ್ರಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.