ಬೆಳಗಾವಿ : ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಿ ವರ್ಗದ ದೇವಸ್ಥಾನಗಳನ್ನು ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸಲಾಗುವುದು ಎಂದು ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯೆ ಡಾ.ತೇಜಸ್ವಿನಿಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ವಾರ್ಷಿಕ ವರಮಾನದ ಆಧಾರದ ಮೇರೆಗೆ ಎ,ಬಿ,ಸಿ ವರ್ಗದ ದೇವಸ್ಥಾನಗಳೆಂದು ಗುರುತಿಸಲಾಗಿದ್ದು, ರಾಜ್ಯದಲ್ಲಿ ಕಡಿಮೆ ವಾರ್ಷಿಕ ವರಮಾನ ಇರುವ ದೇವಸ್ಥಾನಗಳ ಸಂಖ್ಯೆಯೇ 34219 ಇವೆ. ಈ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ದಾನಿಗಳ ನೆರವು ಸಹ ಕೋರಲಾಗಿದೆ. ದಾನಿಗಳು ಮುಂದೆ ಬಂದಲ್ಲಿ ಅವರಿಗೆ ನಿಯಾಮನುಸಾರ ಅನುಮತಿ ನೀಡಲಾಗುವುದು. ಅವಶ್ಯಕತೆ ಕಂಡುಬಂದಂತಹ ಅಧಿಸೂಚಿತ ದೇವಸ್ಥಾನಗಳಿಗೆ ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದಲೂ ಸಹ ಧನ ಸಹಾಯ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಪ್ರಸ್ತುತ ಸರಕಾರದಿಂದ ವಾರ್ಷಿಕ ರೂ.48 ಸಾವಿರ ರೂ.ಗಳನ್ನು ತಸ್ತೀಕ್/ವರ್ಷಾಶನವನ್ನು ದೇವಾಲಯಗಳಲ್ಲಿ ಪ್ರತಿನಿತ್ಯ ಪೂಜೆ ಕೈಂಕರ್ಯಗಳನ್ನು ನೆರವೇರಿಸುವುದಕ್ಕೆ ಒದಗಿಸಲಾಗುತ್ತಿದ್ದು, ಇದನ್ನು ಹೆಚ್ಚಿಸುವುದಕ್ಕೆ ಉದ್ದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯದಿಂದ ಹಿಮಾಲಯದ ಗಿರಿ ಶಿಖರಗಳಲ್ಲಿರುವ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ.30 ಸಾವಿರಗಳಂತೆ ಸರಕಾರದ ಸಹಾಯಧನ ವಿತರಿಸಲಾಗುತ್ತಿದ್ದು,ಅದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚಿಸಲು ಕ್ರಮವಹಿಸಲಾಗುವುದು. ಕಾಶಿಯಾತ್ರೆ ಕೈಗೊಳ್ಳಲು ಸಹಾಯಧನ ನೀಡುವುದರ ಬಗ್ಗೆ ಪ್ರಸ್ತಾವನೆ ಇರುವುದಿಲ್ಲ ಎಂದು ಸ್ಪಷ್ಡಪಡಿಸಿದ ಸಚಿವೆ ಜೊಲ್ಲೆ ಅವರು ಕಾಶಿಗೆ ವಿಶೇಷ ರೈಲು ಓಡಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.