ಚಿಕ್ಕೋಡಿ : ಸಂಶಯ ಪಿಶಾಚಿ ಎನ್ನುವುದು ಎಂಥ ನೀಚ ಕೃತ್ಯಗಳನ್ನು ಮಾಡಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ಘಟನೆ. ತಾನೊಬ್ಬನೇ ದುಡಿದರೆ ಸಾಲದು ಎಂದು ಪತ್ನಿಯನ್ನು ಕೆಲಸಕ್ಕೆ ಕಳುಹಿಸಿದ್ದೂ ಅಲ್ಲದೇ ಆಕೆಯ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿದ್ದಾನೆ ಪಾಪಿ ಗಂಡ!
ಇಂಥದ್ದೊಂದು ದುರಂತದ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿಯಲ್ಲಿ. ಪ್ರದೀಪ್ ಎಂಬ ಪಾಪಿ ಗಂಡನಿಗೆ ಬಲಿಯಾದವರು ಆಶಾ ಎಂಬ ಮಹಿಳೆ. ಇಬ್ಬರು ಕಂದಮ್ಮಗಳು ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಪ್ರದೀಪ್ ಮತ್ತು ಆಶಾ ಮದುವೆ 15 ವರ್ಷಗಳ ಹಿಂದೆ ಆಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ದಿನಪೂರ್ತಿ ಕುಡಿದು ಗಲಾಟೆ ಮಾಡುತ್ತಿದ್ದ ಗಂಡನನ್ನು ಸಹಿಸಿಕೊಂಡು ಆಶಾ ಇಷ್ಟು ವರ್ಷ ಸಂಸಾರ ಮಾಡಿದ್ದರು. ಆದರೆ ಐದು ವರ್ಷಗಳಿಂದ ಹಿಂಸೆ ತಾಳದೇ ಬೇರೆಯಾಗಿ ವಾಸವಾಗಿದ್ದರು. ವರ್ಷದ ಹಿಂದೆ ಪತ್ನಿಯ ಮನವೊಲಿಸಿ ಅಂತೂ ಈತ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಆದರೆ ದುಡಿದದ್ದೆಲ್ಲಾ ಕುಡಿದು ಖರ್ಚು ಮಾಡುತ್ತಿದ್ದ ಪ್ರದೀಪ್‌ಗೆ ಹಣದ ಅವಶ್ಯಕತೆ ಇದ್ದುದರಿಂದ ತನ್ನ ಪತ್ನಿಯನ್ನೂ ಕೆಲಸಕ್ಕೆ ಕಳುಹಿಸಿದ. ಕುಡಿಯುವುದಕ್ಕೆ ಆತನಿಗೆ ಪತ್ನಿಯ ದುಡ್ಡು ಸಿಕ್ಕಾಗ ನಶೆ ಇನ್ನಷ್ಟು ಏರತೊಡಗಿತ್ತು.
ಪತ್ನಿ ಕೆಲಸಕ್ಕೆ ಹೋಗುತ್ತಿದ್ದುದರಿಂದ ಆಕೆಯ ಮೇಲೆ ಅನುಮಾನ ಶುರುವಾಗಿದೆ ಈತನಿಗೆ. ಇದೇ ವಿಷಯಕ್ಕೆ ದಂಪತಿ ನಡುವೆ ಜಗಳವಾಡುತ್ತಿತ್ತು. ನಿನ್ನೆ ಕಂಠಪೂರ್ತಿ ಕುಡಿದು ಬಂದ ಪ್ರದೀಪ್ ಪತ್ನಿಯ ಸೀರೆಯಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ಬೆಳಗ್ಗೆ ಎದ್ದಾಗ ಪತ್ನಿ ಮೃತಪಟ್ಟಿರುವುದು ತಿಳಿದಿದೆ. ತನ್ನ ಮೇಲೆ ಅನುಮಾನ ಬರಬಾರದು ಎಂದು ನಸುಕಿನಲ್ಲಿಯೇ ಮನೆ ಬಿಟ್ಟು ಹೋಗಿದ್ದಾನೆ. ನಂತರ ಸ್ವಲ್ಪ ಗಂಟೆಯ ಬಳಿಕ ಮನೆಗೆ ಬಂದು ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬೊಬ್ಬೆ ಹೊಡೆದಿದ್ದಾನೆ.
ಪೊಲೀಸರು ತನಿಖೆ ಕೈಗೊಂಡಾಗ ಪ್ರದೀಪನ ಮುಖದ ಮೇಲೆ ಗಾಯದ ಗುರುತುಗಳು ಕಂಡಿವೆ. ಪತ್ನಿಯನ್ನು ಕೊಲೆ ಮಾಡುವ ಸಂದರ್ಭದಲ್ಲಿ ಆಕೆ ತಪ್ಪಿಸಿಕೊಳ್ಳಲು ಮುಖದ ಮೇಲೆ ಗಾಯದ ಗುರುತು ಮಾಡಿರಬಹುದು ಎಂದು ಸಂದೇಹ ಪೊಲೀಸರಿಗೆ ಬಲವಾದಾಗ ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಈತ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.