News Kannada
Friday, October 07 2022

ಬೆಳಗಾವಿ

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಯಾರೂ ಕೂಡ ರಾಜಕಾರಣ ಮಾಡಬಾರದು – ಸಚಿವ ನಿರಾಣಿ - 1 min read

Photo Credit :

ಬೆಳಗಾವಿ,ಏ.13 : ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಯಾರೂ ಕೂಡ ರಾಜಕಾರಣ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಬೆಳಗಾವಿಯಲ್ಲಿರುವ ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಘಟನೆ ನಡೆಯಬಾರದಿತ್ತು. ಆದರೂ ನಡೆದಿರುವುದು ಅತ್ಯಂತ ದುರದೃಷ್ಟಕರ. ಏಕಾಯಿತು? ಎಂಬುದು ಈಗ ಅನಗತ್ಯ. ತನಿಖೆ ನಂತರ ಎಲ್ಲ ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದರು. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್‍ಐಆರ್ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಇದರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಲಿದ್ದು, ಸತ್ಯಾಂಶ ಎಲ್ಲರಿಗೂ ಗೊತ್ತಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ತನಿಖೆಯಲ್ಲಿ ಸರ್ಕಾರ ಎಲ್ಲಿಯೂ ಕೂಡ ಹಸ್ತಕ್ಷೇಪ ಮಾಡುವುದಿಲ್ಲ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವರಾದ ಅರಗ ಜ್ಞಾನೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು. ಕಮೀಷನ್ ಕೊಡದೆ ಇದ್ದಕ್ಕೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಯಾವುದೇ ಒಬ್ಬ ವ್ಯಕ್ತಿಗೆ ಟೆಂಡರ್ ನೀಡಬೇಕಾದರೆ ನಿಯಮಗಳು ಇರುತ್ತವೆ ಎಂದರು.

ಟೆಂಡರ್ ಪಡೆಯಬೇಕಾದರೆ ಜಾಹಿರಾತು ನೀಡಬೇಕು. ನಂತರ ವರ್ಕ್ ಆರ್ಡರ್ ಕೊಡಬೇಕು. ಇಲ್ಲಿ ಈಶ್ವರಪ್ಪನವರು ನನಗೆ ಸಂತೋಷ್ ಪಾಟೀಲ್ ಯಾರು ಎಂಬುದೇ ಗೊತ್ತಿಲ್ಲ ಎಂದು ಹೇಳುತ್ತಾರೆ. ವರ್ಕ್ ಆರ್ಡರ್ ಕೊಡದಿದ್ದಾಗ ಅವರು ಹೇಗೆ ಕಾಮಗಾರಿ ನಡೆಸಿದ್ದಾರೋ ನಮಗೂ ಗೊತ್ತಿಲ್ಲ. ಆದರೆ ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ನಿನ್ನೆ ನಡೆದುಕೊಂಡ ರೀತಿ ಅಸಹ್ಯ ಹುಟ್ಟಿಸುತ್ತದೆ ಎಂದು ನಿರಾಣಿ ಕಿಡಿಕಾರಿದರು.
ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೂ, ಕಮೀಷನ್ ಕಾರಣಕ್ಕಾಗಿಯೇ ಈ ಘಟನೆ ನಡೆದಿದೆ ಎಂದು ಯಾವುದೇ ಆಧಾರವಿಲ್ಲದೆ ಕಾಂಗ್ರೆಸ್ ಆರೋಪ ಮಾಡುವುದು ಸರಿಯಲ್ಲ. ಅಷ್ಟಕ್ಕೂ ಅವರ ಬಳಿ ಏನು ಸಾಕ್ಷಾಧಾರಗಳಿವೆ ಎಂದು ಪ್ರಶ್ನಿಸಿದರು.

ಯಾವುದೇ ದಾಖಲೆಗಳಿಲ್ಲದೆ ಒಬ್ಬರ ಮೇಲೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಈಗಾಗಲೇ ಸರ್ಕಾರ ತನಿಖೆಗೆ ಸೂಚನೆ ನೀಡಿರುವುದರಿಂದ ಎಲ್ಲವೂ ಸತ್ಯಾಂಶವು ಬಯಲಿಗೆ ಬರಲಿದೆ. ಈ ದೇಶದಲ್ಲಿ ಕಾನೂನು ಮತ್ತು ನ್ಯಾಯಾಲಯಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಅಭಿಪ್ರಾಯಪಟ್ಟರು.

ನಾವಾಗಲಿ ನಮ್ಮ ಸರ್ಕಾರವಾಗಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಬಯಸಿರಲಿಲ್ಲ. ಅವರಿಗೆ ಪುಟ್ಟ ಮಕ್ಕಳು ಕೂಡ ಇದ್ದಾರೆ. ಕುಟುಂಬವನ್ನು ನೋಡಿದರೆ ನಮಗೂ ಕೂಡ ಅತ್ಯಂತ ದುಃಖ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಮಾನವೀಯತೆ ದೃಷ್ಟಿಯಿಂದ ನಾವು ಕುಟುಂಬಕ್ಕೆ ಏನೆಲ್ಲ ಸಹಾಯ ಮಾಡಬೇಕೋ ಮಾಡುತ್ತೇವೆ . ನಮ್ಮ ಸರ್ಕಾರ ಅವರ ಕುಟುಂಬದ ನೆರವಿಗೆ ಧಾವಿಸಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.

See also  ಫೆ.28 ರಂದು ಬೆಳಗಾವಿ, ಧಾರವಾಡ ಮತ್ತು ದ.ಕಜಿಲ್ಲೆಗಳಲ್ಲಿ ತಾತ್ಕಾಲಿಕ ಪ್ರವಾಸ ಕೈಗೊಳ್ಳಲಿರುವ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ನಾನು ಕೂಡ ಚರ್ಚೆ ಮಾಡುತ್ತೇನೆ. ಮಾನವೀಯತೆಯಿಂದ ನಾವು ಏನು ಮಾಡಬಹುದೋ ಅವೆಲ್ಲವನ್ನೂ ಮಾಡುತ್ತೇವೆ. ಆ ಕುಟುಂಬ ವರ್ಗದವರನ್ನು ಏಕಾಂಗಿಯಾಗಿ ಬಿಡುವುದಿಲ್ಲ ಎಂದು ಅಭಯ ನೀಡಿದರು. ಸಾಂತ್ವಾನ: ಇದಕ್ಕೂ ಮುನ್ನ ವಿಧಾನಪರಿಷತ್‍ನ ಮಾಜಿ ಸದಸ್ಯ ಮಹಂತೇಶ್ ಕಮಠಗಿ ಅವರ ಜೊತೆ ಬೆಳಗಾವಿಯ ಹಿಂಡಲಗದಲ್ಲಿರುವ ಸಂತೋಷ್ ಪಾಟೀಲ್ ನಿವಾಸಕ್ಕೆ ಆಗಮಿಸಿ ಸಾಂತ್ವಾನ ಹೇಳಿದರು.

ಮೃತ ಸಂತೋಷ್ ಪಾಟೀಲ್ ಅವರ ಪತ್ನಿ ಜಯಶ್ರೀ, ಮಕ್ಕಳು ಹಾಗೂ ತಾಯಿ ಪಾರ್ವತಮ್ಮ ಸೇರಿದಂತೆ ಕುಟುಂಬ ವರ್ಗದವರನ್ನು ಭೇಟಿಯಾಗಿ ಕಂಬನಿ ಮಿಡಿದರು. ಮೃತ ಸಂತೋಷ್ ಪತ್ನಿ ಜಯಶ್ರೀಗೆ ಸರ್ಕಾರಿ ಕೆಲಸ ಕೊಡಿಸಿದರೆ ಅವರ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಕುಟುಂಬ ಸದಸ್ಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನಿರಾಣಿ, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಜೊತೆ ಚರ್ಚಿಸಿ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು