ಬೆಳಗಾವಿ, ಸುವರ್ಣಸೌಧ ಡಿ.22; ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಲ್ಲಿ ಭೂ ಪರಿವರ್ತನೆ ಕಾಲಾವಧಿಯನ್ನು ಒಂದು ತಿಂಗಳಿನಿಂದ ಏಳು ದಿನಗಳಿಗೆ ಇಳಿಸುವ ಮಸೂದೆಗೆ ವಿಧಾನಸಭೆಯಲ್ಲಿಂದು ಅಂಗೀಕಾರ ದೊರೆಯಿತು.
ಕಂದಾಯ ಸಚಿವ ಆರ್. ಅಶೋಕ ಮಂಡಿಸಿದ ಕರ್ನಾಟಕ ಭೂ ಕಂದಾಯ ವಿಧೇಯಕ -22 ಮಂಡಿಸಿದಾಗ ಕೆಲ ಸಲಹೆ ಸೂಚನೆಗಳು ನೀಡಿ ಒಪ್ಪಿಗೆ ನೀಡಲಾಯಿತು.
ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 30 ದಿನಗಳು ಇರುವ ಭೂ ಪರಿವರ್ತನಾ ಅವಧಿಯನ್ನು 7 ದಿನಗಳಿಗೆ ಇಳಿಸಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಕಂದಾಯ ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಅರ್ಹ ದಾಖಲೆ ಸಮೇತ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಭೂ ಪರಿವರ್ತನಾ ಆದೇಶವಾಗದಿದ್ದರೆ ಅದು ತನ್ನಿಂದ ತಾನೇ (ಡೀಮ್ಡ್)ಭೂ ಪರಿವರ್ತನೆ ಆಗಿದೆ ಎಂದು ಭಾವಿಸಬೇಕಾಗುತ್ತದೆ ಅದಕ್ಕೆ ಈ ವಿಧೇಯಕ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಅಶೋಕ ವಿವರಿಸಿದರು.
ಇದು ಕೇವಲ ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಿಗೆ ಅನ್ವಯವಾಗಲಿದ್ದು,ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಒಂದು ತಿಂಗಳಿನ ಅವಧಿ ಮುಂದುವರೆಯಲಿದೆ ಎಂದು ಹೇಳಿದರು.
ಎಚ್.ಕೆ.ಪಾಟೀಲ್,ಆರ್.ರಮೇಶ್ಕುಮಾರ್,ಶಿವಲಿಂಗೇಗೌಡ,ಅರವಿಂದ ಲಿಂಬಾವಳಿ ಸೇರಿದಂತೆ ಇನ್ನಿತರ ಕೆಲ ಸದಸ್ಯರ ಸಲಹೆ ಒಪ್ಪಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು.