News Kannada
Monday, February 06 2023

ಬೆಳಗಾವಿ

ಬೆಳಗಾವಿ: ರಾಜ್ಯದಲ್ಲಿ ಕುಂಠಿತಗೊಳ್ಳುತ್ತಿರುವ ಕೃಷಿ ಚಟುವಟಿಕೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ

Bengaluru: Bjp government was formed by unethical means, says Siddaramaiah
Photo Credit : Facebook

ಬೆಳಗಾವಿ: ಇಂದಿನ ವಿಧಾನಸಭಾ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕುಂಠಿತಗೊಳ್ಳುತ್ತಿರುವ ಕೃಷಿ ಚಟುವಟಿಕೆಗಳು, ನಷ್ಟದಲ್ಲಿರುವ ರೈತರು, ಸಾಂಕ್ರಾಮಿಕ ರೋಗಗಳಿಂದ ಹಾನಿಗೀಡಾದ ಬೆಳೆಗಳು ಮತ್ತು ಅವುಗಳ ಬಗ್ಗೆ ಸರ್ಕಾರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು.

ಕರ್ನಾಟಕದಲ್ಲಿ ಸುಮಾರು 7 ಕೋಟಿ ಜನಸಂಖ್ಯೆ ಇದೆ, ಇದರಲ್ಲಿ ಸುಮಾರು 60% ಜನ ಹಳ್ಳಿಗಾಡಿನಲ್ಲಿ ವಾಸ ಮಾಡುತ್ತಿದ್ದಾರೆ. ಕೃಷಿ ಈ ದೇಶದ ಬೆನ್ನೆಲುಬು, ರೈತ ಅನ್ನದಾತ ಎಂಬುದು ಬಹಳ ಕಾಲದಿಂದ ಹೇಳುತ್ತಾ, ಕೇಳುತ್ತಾ ಬಂದಿದ್ದೇವೆ. ಸ್ವಾತಂತ್ರ್ಯ ಬಂದ ವೇಳೆ ದೇಶದಲ್ಲಿ ಆಹಾರ ರಕ್ಷಣೆ ಇರಲಿಲ್ಲ, ಹಸಿರು ಕ್ರಾಂತಿಯ ನಂತರ ಆಹಾರ ಭದ್ರತೆ ಸಿಕ್ಕಿದೆ. ಎಲ್ಲರಿಗೂ ಆಹಾರ, ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ವಸತಿ. ಎಲ್ಲರಿಗೂ ಆರೋಗ್ಯ ಹೀಗೆ ಮೂಲಭೂತ ಸೌಕರ್ಯಗಳು ಎಲ್ಲರಿಗೂ ಸಿಗಬೇಕು ಎಂಬುದು ಅತ್ಯಂತ ಅವಶ್ಯ. ಆಹಾರ ಭದ್ರತೆ ಸಿಕ್ಕಮೇಲೆ ಬಹಳಷ್ಟು ಜನ ಅನ್ನದಾತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ, ವಿಶೇಷವಾಗಿ ಯುವ ಜನರು ಕೃಷಿ ತೊರೆದು ಬೇರೆ ಉದ್ಯೋಗಗಳನ್ನು ಅರಸಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಕೃಷಿ ಲಾಭದಾಯಕ ಉದ್ಯೋಗವಲ್ಲ ಎಂಬುದು.

ಕೃಷಿ ಶೇ.50 ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ರಾಜ್ಯದಲ್ಲಿ ಸುಮಾರು 3 ಕೋಟಿ ಜನ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿಯಲ್ಲಿನ ಬಿಕ್ಕಟ್ಟಿನಿಂದಾಗ ರೈತರು ಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. 2001ರಲ್ಲಿ ಹಿಡುವಳಿದಾರರ ಸಂಖ್ಯೆ 62 ಲಕ್ಷ ಕುಟುಂಬಗಳು. 2016ರಲ್ಲಿ ಅದು 87 ಲಕ್ಷ ಕುಟುಂಬಗಳಾಗಿ ಒಡೆದಿದೆ. ವ್ಯವಸಾಯಕ್ಕೆ ಯೋಗ್ಯವಾದ ಜಮೀನು ಅಷ್ಟೇ ಇದ್ದರೂ ಹಿಡುವಳಿದಾರರ ಸಂಖ್ಯೆ ಏರಿಕೆಯಾಗಿದೆ. ಹಿಡುವಳಿಯ ಗಾತ್ರ ಕಡಿಮೆಯಾದಂತೆ ಅದರಿಂದ ಬರುವ ಆದಾಯದ ಪ್ರಮಾಣವೂ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಹೆಕ್ಟೇರ್‌ ಗಿಂತ ಕಡಿಮೆ ಭೂಮಿ ಹೊಂದಿರುವವರು 1995-96ರಲ್ಲಿ 26.1 ಲಕ್ಷ ಇತ್ತು, ಇದು 2015-16 ರಲ್ಲಿ 46.67 ಲಕ್ಷ ಆಗಿದೆ. ಸುಮಾರು 20 ಲಕ್ಷ ಹಿಡುವಳಿದಾರರ ಸಂಖ್ಯೆ ಹೆಚ್ಚಾಗಿದೆ. 1995ರಲ್ಲಿ ಇವರ ಪ್ರಮಾಣ 41.95% ಇತ್ತು, ಅದು 2015ರಲ್ಲಿ 54.05% ಗೆ ಹೆಚ್ಚಾಗಿದೆ. ಒಂದರಿಂದ 2 ಹೆಕ್ಟೇರ್‌ ಭೂಮಿ ಹೊಂದಿರುವ ಸಣ್ಣ ರೈತರು 1995-96ರಲ್ಲಿ 17.07 ಲಕ್ಷ ಇದ್ದರು ಅಂದರೆ ಸುಮಾರು 27.44% ಇದ್ದರು, 2015-16ರಲ್ಲಿ 21.38 ಲಕ್ಷಕ್ಕೆ ಹೆಚ್ಚಾಗಿದ್ದಾರೆ. 2 ರಿಂದ 4 ಹೆಕ್ಟೇರ್‌ ಭೂಮಿ ಹೊಂದಿರುವ ಮಧ್ಯಮ ವರ್ಗದ ರೈತರು 1995-96ರಲ್ಲಿ 12.04 ಲಕ್ಷ ಜನ ಇದ್ದರು, ಇದು 2015-16ರಲ್ಲಿ 11.93 ಲಕ್ಷ ಜನಕ್ಕೆ ಇಳಿಕೆಯಾಗಿದ್ದಾರೆ. 4 ರಿಂದ 10 ಹೆಕ್ಟೇರ್‌ ಭೂಮಿ ಹೊಂದಿರುವ ದೊಡ್ಡ ರೈತರು 1995-96ರಲ್ಲಿ 1.06 ಲಕ್ಷ ಇದ್ದರು, ಅದು 2015-16 ರಲ್ಲಿ 0.56 ಲಕ್ಷಕ್ಕೆ ಇಳಿಯಾಗಿದ್ದಾರೆ. ಹೀಗೆ ಭೂಮಿಯ ಹಂಚಿಕೆ ಆದಂತೆಲ್ಲ ಆದಾಯವೂ ಕಡಿಮೆಯಾಗಿದೆ.

ಕೃಷಿ ಕುಟುಂಬವೊಂದರ ಸರಾಸರಿ ವಾರ್ಷಿಕ ಆದಾಯ 10,208 ರೂಪಾಯಿ. ಒಂದು ರೈತ ಕುಟುಂಬದಲ್ಲಿ ನಾಲ್ಕು ಮಂದಿ ಸದಸ್ಯರಿದ್ದಾರೆ ಎಂದು ಅಂದಾಜು ಮಾಡಿದರೆ ಕುಟುಂಬದ ಪ್ರತಿಯೊಬ್ಬನ ತಲಾ ಆದಾಯ 2550 ರೂಪಾಯಿ. ಅಂದರೆ ಒಬ್ಬನ ನಿತ್ಯದ ಆದಾಯ 80 ರೂಪಾಯಿ ಮಾತ್ರ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಒಬ್ಬನ ದೈನಂದಿನ ಆದಾಯ 1.90 ಡಾಲರ್‌ ಗಿಂತ ಕಡಿಮೆ ಇದ್ದರೆ ಅವರು ಕಡುಬಡವರು ಎಂದು ಪರಿಗಣಿಸಬೇಕು. ನಮ್ಮಲ್ಲಿ ಒಬ್ಬ ರೈತನ ಆದಾಯ ಒಂದು ಡಾಲರ್‌ ಗಿಂತ ಕಡಿಮೆ ಇದೆ. ಹೀಗಾಗಿ ನಮ್ಮ ದೇಶದ ರೈತರಲ್ಲಿ ಹೆಚ್ಚು ಬಡವರಿದ್ದಾರೆ.

ಪ್ರತೀ ವರ್ಷ ರಾಜ್ಯದ ಆಂತರಿಕೆ ಉತ್ಪನ್ನಕ್ಕೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ ಮತ್ತು ರೇಷ್ಮೆ ಎಲ್ಲವೂ ಸೇರಿ ಎರಡೂವರೆ ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡುತ್ತಿವೆ. ಪ್ರತೀ ವರ್ಷ ಗೊಬ್ಬರ, ಬೀಜ, ಕೀಟನಾಶಕಗಳಿಗೆ ರಾಜ್ಯದ ರೈತರು ಖರ್ಚು ಮಾಡುವ ಹಣ 20,000 ಕೋಟಿ ರೂಪಾಯಿ.

5 ವರ್ಷದ ಹಿಂದೆ ನಮ್ಮ ಸರ್ಕಾರ ಇದ್ದಾಗ ಹೈನುಗಾರರಿಗೆ ಪ್ರತೀ ಲೀಟರ್‌ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವೂ ಸೇರಿ ಒಟ್ಟು ಲೀಟರ್‌ ಗೆ 32 ರೂಪಾಯಿ ಸಿಗುತ್ತಿತ್ತು. ಈಗ ಪ್ರೋತ್ಸಾಹ ಧನವೂ ಸೇರಿ ಲೀಟರ್‌ ಗೆ 35, 37 ರೂಪಾಯಿ ಸಿಗುತ್ತಿದೆ. ಆದರೆ ಹಿಂಡಿ, ಬೂಸ ಮತ್ತು ಮೇವಿನ ಬೆಲೆ ನೂರಾರು ಪಟ್ಟು ಹೆಚ್ಚಾಗಿದೆ. ಹಾಲಿನ ಬೆಲೆಯಲ್ಲಿ 30% ಹೆಚ್ಚಾಗಿದೆ. 2017-18ರಲ್ಲಿ 49 ಕೆ.ಜಿ ಬೂಸಾದ ಬೆಲೆ 450 ರೂ. ಇದ್ದದ್ದು ಈಗ 1300 ರಿಂದ 1350 ರೂ. ಆಗಿದೆ. 30 ಕೆ.ಜಿ ಹಿಂಡಿಯ ಬೆಲೆ 400 ರೂ. ಇದ್ದದ್ದು ಈಗ 1400 ರೂ.ಗಿಂತ ಹೆಚ್ಚಾಗಿದೆ. ಕೆಎಂಎಫ್‌ ನವರು ಕೊಡುವ ಫೀಡ್‌ ಬೆಲೆ ಕಳೆದ ವಾರ 200 ರೂ. ಜಾಸ್ತಿಯಾಗಿದೆ. ಇವುಗಳ ಜೊತೆಗೆ ಚರ್ಮ ಗಂಟು ರೋಗ ಬಂದಿದೆ, ಇದರಿಂದ ಸುಮಾರು 25,000 ರಾಸುಗಳು ಸಾವನ್ನಪ್ಪಿವೆ. ಪಶು ಸಂಗೋಪನೆ ಇಲಾಖೆಯ ನಿರ್ದೇಶಕರು ಕಳೆದ ಎರಡು ವರ್ಷದಲ್ಲಿ ನೀಡಿರುವ ಉತ್ತರದಲ್ಲಿ ಸುಮಾರು 15 ಲಕ್ಷ ಜಾನುವಾರ ವ್ಯತ್ಯಾಸ ಇದೆ. ಒಮ್ಮೆ ನೀಡಿರುವ ಉತ್ತರದಲ್ಲಿ ಸುಮಾರು 1 ಕೋಟಿ 29 ಲಕ್ಷ ಜಾನುವಾರುಗಳಿವೆ ಎಂದಿದೆ, ಎರಡು ತಿಂಗಳ ನಂತರ ನೀಡಿದ ಉತ್ತರದಲ್ಲಿ 1 ಕೋಟಿ 14 ಲಕ್ಷ ಜಾನುವಾರುಗಳಿವೆ ಎಂದಿದೆ. ಈ 15 ಲಕ್ಷ ಜಾನುವಾರುಗಳು ಏನಾಯ್ತು ಎಂದು ಪ್ರಶ್ನಿಸಿದರೆ ಸರ್ಕಾರದಿಂದ ಉತ್ತರ ಬಂದಿಲ್ಲ.

94 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಇದ್ದದ್ದು 76 ಲಕ್ಷ ಲೀಟರ್‌ ಗೆ ಇಳಿಕೆ ಕಂಡಿದೆ. ಚರ್ಮಗಂಟು ರೋಗದಿಂದಾಗಿ ನಿತ್ಯ 2 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದಕ್ಕೆ ರೈತರು ಹೊಣೆಯಲ್ಲ, ಸರ್ಕಾರವೇ ಹೊಣೆ. ನಿತ್ಯ 6 ಕೋಟಿ 66 ಲಕ್ಷ ಹಣ ರೈತರಿಗೆ ನಷ್ಟವಾಗುತ್ತಿದೆ. ಹೀಗಾಗಿ ಹೈನುಗಾರಿಕೆಯಿಂದ ಜನ ವಿಮುಖರಾಗುತ್ತಿದ್ದಾರೆ. ಲಂಪಿ ಸ್ಕಿನ್‌ ಡಿಸೀಸ್‌ ( ಚರ್ಮ ಗಂಟು ರೋಗ ) ಒಂದು ಸಾಂಕ್ರಾಮಿಕ ರೋಗ. ರಾಜ್ಯದಲ್ಲಿ 2 ಲಕ್ಷದ 38 ಸಾವಿರ ಜಾನುವಾರುಗಳಿಗೆ ಬಂದಿದೆ. 1 ಕೋಟಿ 29 ಲಕ್ಷ ಜಾನುವಾರಗಳ ಪೈಕಿ 69 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಅಂದರೆ 50% ಜಾನುವಾರುಗಳಿಗೆ ಇನ್ನೂ ಲಸಿಕೆ ನೀಡಬೇಕಿದೆ. ಹಿಂಡಿ, ಬೂಸ, ಸಾಂಕ್ರಾಮಿಕ ರೋಗಗಳ ಕಾರಣಕ್ಕೆ ನಿತ್ಯ 18 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಸರ್ಕಾರ ಈ ಕೂಡಲೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಬೇಕು ಎಂದು ಒತ್ತಾಯ ಮಾಡುತ್ತೇನೆ. ಇದರಿಂದ ಸುಮಾರು 25 ಲಕ್ಷ ಹಾಲು ಉತ್ಪಾದಕರ ಬದುಕು ದುಸ್ಥರವಾಗಿದೆ.

See also  ಬೆಂಗಳೂರು: ಗರ್ಭಪಾತದ ಮಾತ್ರೆ ಸೇವಿಸಿ ಮಹಿಳೆ ಸಾವು

ಚರ್ಮಗಂಟು ರೋಗದಿಂದ ಸಾವನ್ನಪ್ಪುವ ಜಾನುವಾರುಗಳಿಗೆ ನೀಡುವ ಪರಿಹಾರವನ್ನು ಸರ್ಕಾರ ಹೆಚ್ಚು ಮಾಡಬೇಕು, 21,305 ಜಾನುವಾರುಗಳು ಈ ರೋಗಕ್ಕೆ ಬಲಿಯಾಗಿವೆ ಎಂದು ಪಶುಸಂಗೋಪನಾ ಇಲಾಖೆ ಮಾಹಿತಿ ನೀಡಿದೆ, ಈಗದು 22,000 ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ಸಾವನ್ನಪ್ಪಿದ ರಾಸುಗಳಿಗೆ ತತ್‌ ಕ್ಷಣ ಪರಿಹಾರ ನೀಡುವ ಕೆಲಸ ಮಾಡಬೇಕು.

ಸುಮಾರು 15 ಲಕ್ಷ ಹೆಕ್ಟೇರ್‌ ಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಾರೆ, ಸುಮಾರು 25 ಲಕ್ಷ ರೈತ ಕುಟುಂಬಗಳು ಇದರ ಮೇಲೆ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ ಸುಮಾರು 6.5 ಕೋಟಿ ಟನ್‌ ಕಬ್ಬು ಉತ್ಪಾದನೆಯಾಗುತ್ತದೆ. 2012-13ರಲ್ಲಿ ಪ್ರತೀ ಟನ್‌ ಗೆ ಎಫ್‌,ಆರ್‌,ಪಿ ಬೆಲೆ 1700 ರೂ. ಇತ್ತು, ಇಳುವರಿ 9.5 ಇತ್ತು 2017-18ರಲ್ಲಿ ಎಫ್‌,ಆರ್‌,ಪಿ ಬೆಲೆ 2550 ರೂ. ಇತ್ತು ಇಳುವರಿ 9.5 ಇತ್ತು. 2022-23ರಲ್ಲಿ ಎಫ್‌,ಆರ್‌,ಪಿ ಬೆಲೆ 3050 ರೂ. ಆಗಿದೆ. ಇಳುವರಿ 10.25 ಎಂದು ನಿಗದಿ ಮಾಡಲಾಗಿದೆ. ಒಂದು ಕಡೆ ಇಳುವರಿಯನ್ನು ಹೆಚ್ಚಿಸಿ, ಮತ್ತೊಂದು ಕಡೆ ಸರ್ಕಾರ 150 ರೂ. ಹೆಚ್ಚಿಗೆ ನೀಡಿದೆ ಎಂದು ಪ್ರಚಾರ ಪಡೆಯುತ್ತಿದೆ.

ತೆಲಂಗಾಣದಲ್ಲಿ ಕಬ್ಬಿನ ಇಳುವರಿ 9% ಇದೆ, ಎಫ್‌,ಆರ್‌,ಪಿ ಬೆಲೆ 3200 ರೂ ಇದೆ. ತಮಿಳುನಾಡಿನಲ್ಲಿ ಇಳುವರಿ 9.5 ಇದ್ದರೆ 3500 ರೂ. ನೀಡಲಾಗುತ್ತಿದೆ. ಇದರ ಮೇಲೆ 190 ರೂ ಇನ್ಸಿಂಟೀವ್‌ ನೀಡಲಾಗುತ್ತಿದೆ. ಪಂಜಾಬ್‌ ನಲ್ಲಿ 3800 ರೂ. ಉತ್ತರ ಪ್ರದೇಶದಲ್ಲಿ 3500 ರೂ. ಗುಜರಾತ್‌ ನಲ್ಲಿ 4400 ರೂ. ನೀಡಲಾಗುತ್ತಿದೆ. ನಮ್ಮಲ್ಲಿ 3050 ರೂ.

ಒಂದು ಟನ್‌ ಕಬ್ಬಿನಿಂದ 300 ಕೆ.ಜಿ ಸಿಪ್ಪೆ ಸಿಗುತ್ತದೆ, ಕೋ ಜನರೇಷನ್‌ ಇದ್ದರೆ 140 ಯುನಿಟ್‌ ವಿದ್ಯುತ್‌ ಉತ್ಪಾದನೆ ಆಗುತ್ತದೆ. ಇದನ್ನು 4.5 ರಿಂದ 5 ರೂ. ಗೆ ಮಾರಲಾಗುತ್ತದೆ. 40 ರಿಂದ 45 ಲೀಟರ್‌ ಮೊಲಾಸಿಸ್‌ ತಯಾರಾಗುತ್ತದೆ. 25 ಲೀಟರ್‌ ಎಥೆನಾಲ್‌ ತಯಾರಾಗುತ್ತದೆ. ಒಂದು ಲೀಟರ್‌ ಎಥೆನಾಲ್‌ ಗೆ 65 ರೂ. ಬೆಲೆ ಇದೆ. ಇದರಲ್ಲಿ ನಮಗೆ ಪಾಲು ಬೇಕು ಎಂದು ರೈತರು ಕೇಳುತ್ತಿದ್ದಾರೆ. ರೈತರ ಈ ಬೇಡಿಕೆ ಸರಿಯಾಗಿದೆ.

2013-14ರಲ್ಲಿ ಬೆಳಗಾವಿಯಲ್ಲಿ ಕಬ್ಬು ಬೆಳೆದ ರೈತ ಆತ್ಮಹತ್ಯೆ ಮಾಡಿಕೊಂಡಾಗ ಪ್ರತೀ ಟನ್‌ ಗೆ 200 ರೂ. ಪ್ರೋತ್ಸಾಹ ಧನ ನೀಡಿದ್ದೆವು. ಒಟ್ಟು 1800 ಕೋಟಿ ಇದಕ್ಕಾಗಿ ಅನುದಾನ ವ್ಯಯಿಸಲಾಗಿತ್ತು. ಈಗ ರೈತರು 3500 ರೂ. ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಪೆಟ್ರೋಲ್‌ ಜೊತೆಗೆ 25% ಎಥೆನಾಲ್‌ ಬ್ಲೆಂಡ್‌ ಮಾಡಲು ಅವಕಾಶ ನೀಡಿದೆ. ಈ ಅವಕಾಶ 2030ರ ವರೆಗೆ ಇದೆ. ಸರ್ಕಾರ ಪ್ರತೀ ಟನ್‌ ಗೆ ಎಫ್‌,ಆರ್‌,ಪಿ ಬೆಲೆ 3500 ಮಾಡಬೇಕು ಮತ್ತು ಹೋರಾಟ ಮಾಡುತ್ತಿರುವ ಕಬ್ಬು ಬೆಳೆಗಾರರನ್ನು ಕರೆದು ಚರ್ಚೆ ಮಾಡಿ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡುತ್ತೇನೆ. ಪ್ರತೀ ಎಕರೆಗೆ ಕಬ್ಬು ಬೆಳೆಗಾರನಿಗೆ 12,000 ರೂ. ನಷ್ಟವಾಗುತ್ತಿದೆ. ಇದೇನಾ ರೈತರ ಆದಾಯವನ್ನು ಡಬ್ಬಲ್‌ ಮಾಡುವುದು ಎಂದರೆ?

ಅಡಿಕೆ ಬೆಳೆಗಾರರನ್ನು ಸರ್ಕಾರವೇ ನಾಶ ಮಾಡಲು ಹೊರಟಂತಿದೆ. ಭೂತಾನ್‌, ಬರ್ಮಾ, ವಿಯಟ್ನಾಂ ನಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಬರ್ಮಾದಿಂದ ಕದ್ದು ಅಡಿಕೆ ಸಾಗಾಟ ಮಾಡಲಾಗುತ್ತಿದೆ. ಸುಮಾರು 17,000 ಟನ್‌ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. ಇದರಿಂದ 55,000 ಒಂದು ಕ್ವಿಂಟಾಲ್‌ ಗೆ ಇದ್ದ ಬೆಲೆ ಇಂದು 35,000 – 40,000 ಕ್ಕೆ ಇಳಿದಿದೆ.

ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಬಂದಿದೆ. ರಾಜ್ಯದಲ್ಲಿ ಸುಮಾರು 5.7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಾಗುತ್ತದೆ. ಸುಮಾರು 10 ರಿಂದ 11 ಲಕ್ಷ ಟನ್‌ ಅಡಿಕೆ ಉತ್ಪಾದನೆ ಆಗುತ್ತದೆ. ಸುಮಾರು 10 ಲಕ್ಷ ರೈತರು ಇದರ ಮೇಲೆ ಅವಲಂಬಿತರಾಗಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಡಿಕೆಗೆ ಹಳದಿ ರೋಗ ಬಂದ ಸಂದರ್ಭದಲ್ಲಿ 80 ಕೋಟಿ ರೂ. ಪರಿಹಾರವಾಗಿ ನೀಡಿದ್ದೆ. ಕ್ವಿಂಟಾಲ್‌ ಗೆ 15,000 ನಷ್ಟವಾಗಿದೆ ಎಂದು ಭಾವಿಸಿದರೂ ಒಟ್ಟು ನಷ್ಟ ಆಗುವುದು 15,000 ಕೋಟಿ ರೂಪಾಯಿ.

ಸರ್ಕಾರ ಕೂಡಲೇ ಎಲೆಚುಕ್ಕಿ ರೋಗದಿಂದ ಭಾದಿತವಾಗಿರುವ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು, ಭೂತಾನ್‌ ನಿಂದ ಬರುತ್ತಿರುವ ಅಡಿಕೆಯನ್ನು ಕೂಡಲೇ ನಿಲ್ಲಿಸಬೇಕು. ಭೂತಾನ್‌ ಅಡಿಕೆಯ ಮುಂದೆ ರಾಜ್ಯದ ಅಡಿಕೆ ಬೆಳೆಗಾರರು ಸ್ಪರ್ಧೆ ಮಾಡಲು ಆಗುವುದಿಲ್ಲ. ಇಲ್ಲಿ ಖರ್ಚು ಜಾಸ್ತಿ.

ಕಾಳು ಮೆಣಸು ಕೆ.ಜಿ 800 ರಿಂದ 500 ಕ್ಕೆ ಇಳಿದಿದೆ. ಇದನ್ನು ಕೂಡ ವಿಯೆಟ್ನಾಂ ಇಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಾಡಿನ ರೈತರು ವಿಯೆಟ್ನಾಂನ ಬೆಳೆಗಾರರ ಜೊತೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಇದನ್ನು ನಿಲ್ಲಿಸಬೇಕು.

ರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್‌ ನಲ್ಲಿ ತೆಂಗು ಬೆಳೆಯಲಾಗುತ್ತದೆ. ದೇಶದ ಒಟ್ಟು ತೆಂಗು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು 31%. ತೆಂಗಿನ ಬೆಲೆ ಒಂದು ಕ್ವಿಂಟಾಲ್‌ ಗೆ 19,000 ಇತ್ತು, ಈಗದು 11,000 ಕ್ಕೆ ಇಳಿದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಬರಗಾಲದಿಂದ ಕೊಬ್ಬರಿ ಬೆಳೆ ಇಳಿಕೆಯಾಗಿತ್ತು, ತಿಪಟೂರಿನ ಕೊಬ್ಬರಿ ಬೆಳೆಗಾರರನ್ನು ಕರೆದು ಮಾತನಾಡಿ, ಮರ ಒಣಗಿ ಹೋದರೆ ಒಂದು ಮರಕ್ಕೆ ಸುಮಾರು 1000 ರೂ. ಪರಿಹಾರ ನೀಡಿದ್ದೆ.

ಗೋಹತ್ಯೆ ನಿಷೇಧ ಕಾಯ್ದೆ ಬಂದ ನಂತರ ರೈತರು ಸಂತೆಗಳಲ್ಲಿ ಜಾನುವಾರುಗಳನ್ನು ಮಾರಾಟ ಮಾಡದಂತಾಗಿದೆ. ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ ನಂತರ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು, ಇದರಿಂದಾಗಿ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಾಸು ತೆಗೆದುಕೊಂಡಿತು. ಆದರೆ ರಾಜ್ಯದಲ್ಲಿ ಎ.ಪಿ.ಎಂ.ಸಿ ಕಾಯ್ದೆಯನ್ನು ಸರ್ಕಾರ ವಾಪಾಸು ಪಡೆದುಕೊಂಡಿಲ್ಲ. ಇದರಿಂದ ಎ.ಪಿ.ಎಂ.ಸಿ ಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಒಟ್ಟು ಎ.ಪಿ.ಎಂ.ಸಿ ಗಳು ಇವೆ.

See also  ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಸರಿ ಮಾಡಲು ಶೀಘ್ರವೇ ಉದ್ಯೋಗ ನೀತಿ ಜಾರಿ: ಸಿಎಂ

2017-18ರಲ್ಲಿ ವಾರ್ಷಿಕ ಎ.ಪಿ.ಎಂ.ಸಿ ಗಳ ಆದಾಯ 520 ಕೋಟಿ. 2018-19 ರಲ್ಲಿ ಇದು 568 ಕೋಟಿ. 2019-20 ರಲ್ಲಿ 618 ಕೋಟಿ. ಎ.ಪಿ.ಎಂ.ಸಿ ಕಾಯ್ದೆ ಬಂದ ನಂತರ 2020-21 ರಲ್ಲಿ 294 ಕೋಟಿಗೆ ಇಳಿದಿದೆ. ಸುಮಾರು 320 ಕೋಟಿ ಕಡಿಮೆಯಾಗಿದೆ. 2021-22 ರಲ್ಲಿ 267 ಕೋಟಿ ಆಗಿದೆ. ಸುಮಾರು 300 ಕೋಟಿ ಆದಾಯ ಕಡಿಮೆಯಾಗಿದೆ. ಈ ವರ್ಷ ಎ.ಪಿ.ಎಂ.ಸಿ ಗಳ ಆದಾಯ 200 ಕೋಟಿ ಬರಬಹುದು. 600 ಕೋಟಿ ಇಂದ 200 ಕೋಟಿಗೆ ಇಳಿಯಲು ಎ.ಪಿ.ಎಂ.ಸಿ ಕಾಯ್ದೆ ಕಾರಣ.

ಸುಮಾರು 19 ರಿಂದ 20 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಬೆಳೆಯಲ್ಲಿ, 5 ಲಕ್ಷ ಮೆಟ್ರಕ್‌ ಟನ್‌ ರಾಗಿಯನ್ನು ಸರ್ಕಾರ ಖರೀದಿ ಮಾಡುತ್ತದೆ. 50% ರಾಗಿಯನ್ನು ಗೃಹ ಬಳಕೆಗೆ ಉಪಯೋಗಿಸಿಕೊಂಡರೂ ಉಳಿದ 10 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸುವವರು ಯಾರು 2017ರಲ್ಲಿ ಒಂದು ಕ್ವಿಂಟಾಲ್‌ ರಾಗಿಗೆ 2293 ರೂ. ಮಾದರಿ ಬೆಲೆ ಸಿಗುತ್ತಿತ್ತು.

2021 ರಲ್ಲಿ ಗುಬ್ಬಿಯಲ್ಲಿ 2305 ರೂ ಸಿಕ್ಕಿದೆ. ಹೊಳೆನರಸೀಪುರದಲ್ಲಿ 2095 ರೂ. ಸಿಕ್ಕಿದೆ. ಚಿಂತಾಮಣಿಯಲ್ಲಿ 2110 ಸಿಕ್ಕಿದೆ.
ಎಂ,ಎಸ್‌,ಪಿ ಬೆಲೆ 3578 ರೂ. ಇದೆ. ಈ ಬೆಲೆ ನೀಡಿ 5 ಲಕ್ಷ ಟನ್‌ ಖರೀದಿ ಮಾಡಿದರೆ ಉಳಿದ ರಾಗಿಯನ್ನು ಕಡಿಮೆ ಬೆಲೆಗೆ ರೈತರು ಮಾರಬೇಕಾಗಿದೆ.

ಎಂ,ಎಸ್‌,ಪಿ ಅಡಿ ಒಬ್ಬ ರೈತನಿಂದ 16 ಕ್ವಿಂಟಾಲ್‌ ಖರೀದಿ ಮಾಡಲಾಗುತ್ತದೆ. ಒಂದು ಎಕರೆಗೆ 25 ರಿಂದ 30 ಕ್ವಿಂಟಾಲ್‌ ಇಳುವರಿ ಬಂದರೆ ನಾಲ್ಕೈದು ಎಕರೆಯಲ್ಲಿ ಬೆಳೆದ ಭತ್ತವನ್ನು ರೈತ ಏನು ಮಾಡಬೇಕು?

ಕೇಂದ್ರ ಸರ್ಕಾರ ಸ್ವಾಮಿನಾಥನ್‌ ಅವರ ವರದಿಯನ್ನು ಅನುಷ್ಠಾನ ಮಾಡಿಲ್ಲ. ನರೇಂದ್ರ ಮೋದಿ ಅವರು ಈ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ವರದಿ ಜಾರಿಯಾಗಿದ್ದರೆ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿತ್ತು. ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದಿದ್ದೇವೆ ಎಂದು ಪ್ರಚಾರ ಮಾಡಿಕೊಳ್ಳುತ್ತಾರೆ. ಆದರೆ ಅಲ್ಲಿ ನೂರೆಂಟು ನಿಬಂಧನೆಗಳು ಇವೆ. ಇದರಿಂದ ರೈತರಿಗೆ ಅಸಲು ಕೂಡ ಸಿಗದಂತಾಗಿದೆ.

14 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲಾಗುತ್ತಿದೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ ಬೆಂಬಲ ಬೆಲೆ ನೀಡಿ ಮೆಕ್ಕೆಜೋಳ ಖರೀದಿ ಮಾಡಲಾಗುತ್ತಿತ್ತು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಒಂದೇ ಒಂದು ಕೆ.ಜಿ ಮೆಕ್ಕೆಜೋಳವನ್ನು ಬೆಂಬಲ ಬೆಲೆ ನೀಡಿ ಖರೀದಿ ಮಾಡಿಲ್ಲ. ಇದಕ್ಕೆ 1870 ರೂ. ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ. 2021ರಲ್ಲಿ ಚನ್ನಗಿರಿಯಲ್ಲಿ ಮೆಕ್ಕೆಜೋಳ ಬೆಲೆ 1423 ರೂ. ಹಾವೇರಿಯಲ್ಲಿ 1494 ರೂ. ಹಿರೇಕೆರೂರಿನಲ್ಲಿ 1427 ರೂ. ದಾವಣಗೆರೆಯಲ್ಲಿ 1620 ರೂ. ಎಲ್ಲೂ ಕೂಡ 1870 ರೂ. ಗೆ ಮಾರಾಟವಾದ ಉದಾಹರಣೆ ಇಲ್ಲ.

ಸುಮಾರು 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತದೆ. ಕಲಬುರಗಿ ಒಂದೇ ಜಿಲ್ಲೆಯಲ್ಲಿ ರಾಜ್ಯದ 50% ತೊಗರಿ ಬೆಳೆಯನ್ನು ಬೆಳೆಯಲಾಗುತ್ತದೆ. ಇದಕ್ಕೆ ಎಂ,ಎಸ್‌,ಪಿ 6600 ರೂ. ನಿಗದಿ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ 4.74 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆ ಬಿತ್ತನೆಯಾಗಿತ್ತು, ಪ್ರವಾಹದಿಂದ 1.3 ಲಕ್ಷ ಹೆಕ್ಟೇರ್‌, ನೆಟೆ ರೋಗದಿಂದ 1.38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 60 ರಿಂದ 70% ತೊಗರಿ ಬೆಳೆ ನಷ್ಟವಾಗಿದೆ. ಇವತ್ತಿನವರೆಗೆ ನಷ್ಟಕ್ಕೀಡಾದ ರೈತರಿಗೆ ಯಾವ ಪರಿಹಾರವನ್ನು ನೀಡಿಲ್ಲ. ಹೆಕ್ಟೇರ್‌ ಗೆ 6 ಕ್ವಿಂಟಾಲ್‌ ಇಳುವರಿ ಬರುತ್ತದೆ. 6600 ಎಂ,ಎಸ್‌,ಪಿ ಬೆಲೆಯಂತೆ 40,000 ರೂ. ನಷ್ಟವಾಗಿದೆ. ಇದೇ ರೀತಿ ಟೊಮೆಟೋ ಮುಂತಾದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದೆ ಕಂಗಾಲಾಗಿದ್ದಾನೆ.

ರಾಜ್ಯ ಸರ್ಕಾರ ಎ,ಪಿ,ಎಂ,ಸಿ ತಿದ್ದುಪಡಿ ಕಾಯ್ದೆಯನ್ನು ಈ ಕೂಡಲೇ ಹಿಂಪಡೆಯಬೇಕು, ಎಂ,ಎಸ್‌,ಪಿ ಯನ್ನು ಬರೀ 19 ಉತ್ಪನ್ನಗಳಿಗೆ ನೀಡಲಾಗುತ್ತಿದೆ ಇದನ್ನು ಹೆಚ್ಚು ಮಾಡಬೇಕು, ರೋಗಗಳಿಂದ ನಷ್ಟಕ್ಕೀಡಾದ ತೊಗರಿ, ಅಡಿಕೆ, ರಾಗಿ, ಮೆಕ್ಕೆಜೋಳ ಮುಂತಾದ ಬೆಳೆಗಾರರಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು. ಬೆಂಬಲ ಬೆಲೆ ಅಡಿ ಖರೀದಿಸುವ ಕೃಷಿ ಉತ್ಪನ್ನಗಳ ಪ್ರಮಾಣವನ್ನು ಹೆಚ್ಚು ಮಾಡಬೇಕು. ಸ್ವಾಮಿನಾಥನ್‌ ವರದಿಯನ್ನು ಯಥಾವತ್ತು ಜಾರಿ ಮಾಡಬೇಕು.

ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡಬೇಕು ಮತ್ತು ಹೀಗೆ ಖರೀದಿ ಮಾಡುವಾಗ ಸ್ವಾಮಿನಾಥನ್‌ ಅವರ ವರದಿಯನ್ನು ಆಧಾರಿಸಿ ಬೆಲೆ ನಿಗದಿ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯಗಳನ್ನು ಒತ್ತಾಯ ಮಾಡುತ್ತೇನೆ. ಇದಾಗದೆ ಹೋದರೆ ಕೃಷಿ ಮೇಲೆ ಅವಲಂಬಿತವಾಗಿರುವ 87 ಲಕ್ಷ ಕುಟುಂಬಗಳು ಬೀದಿಗೆ ಬೀಳಬೇಕಾಗುತ್ತದೆ.

ರೈತರು ಕೃಷಿಗೆ ಹಾಕುವ ಬಂಡವಾಳ ಹೆಚ್ಚಾಗುತ್ತಾ ಹೋಗುತ್ತಿದೆ. ಆದರೆ ಅವರ ಬೆಳೆಗಳಿಗೆ ಸಿಗುತ್ತಿರುವ ಬೆಲೆ ಕಡಿಮೆಯಾಗುತ್ತಿದೆ. ಇದೇನಾ ಅಚ್ಚೇದಿನ್? ಸರ್ಕಾರ ರೈತ ವಿರೋಧಿ ನಿಲುವನ್ನು ಬಿಟ್ಟು ರೈತ ಸ್ನೇಹಿ ನಿಲುವನ್ನು ತಾಳಬೇಕು.

ಮಾತೆತ್ತಿದರೆ ಸರ್ಕಾರ ನಿಮಗಿಂತ ಹೆಚ್ಚು ಕೃಷಿಗೆ ಖರ್ಚು ಮಾಡಿದ್ದೇವೆ ಎನ್ನುತ್ತಾರೆ. ನಮ್ಮ ಸರ್ಕಾರದ ಕೊನೆಯ ಬಜೆಟ್‌ ಗಾತ್ರ 2.02 ಲಕ್ಷ ಕೋಟಿ, ನಾವು ಕೃಷಿಗೆ ಬಜೆಟ್‌ ನ 4.7% ಹಣವನ್ನು ಕೃಷಿಗೆ ಮೀಸಲಿಟ್ಟಿದ್ದೆವು. ಈಗಿನ ಬಜೆಟ್‌ ಗಾತ್ರ 2,65,720 ಕೋಟಿ, ಇದರಲ್ಲಿ ಕೃಷಿಗೆ ಇಟ್ಟಿರುವ ಅನುದಾನ 4.2%. ಅಂದರೆ ಅನುದಾನದ ಪ್ರಮಾಣ ಕಡಿಮೆಯಾಗಿದೆ. ಆದರೂ ಬಿಜೆಪಿ ಸರ್ಕಾರ ನಾವು ಹೆಚ್ಚು ಅನುದಾನ ನೀಡಿದ್ದೇವೆ ಎಂದು ಜಂಬ ಹೊಡೆದುಕೊಳ್ಳುತ್ತದೆ.

800 ಕೋಟಿ ರೂ. ಮೊತ್ತದ ನಮ್ಮ ಸರ್ಕಾರದ ಕೃಷಿ ಭಾಗ್ಯ ಯೋಜನೆ, ಅರಿವು ಯೋಜನೆಗಳನ್ನು ನಿಲ್ಲಿಸಿ, ರೈತರ ಮಕ್ಕಳಿಗೆ 600 ಕೋಟಿ ಅನುದಾನದಲ್ಲಿ ವಿದ್ಯಾರ್ಥಿವೇತನ ನೀಡಿ ನಾವು ಕೃಷಿಗೆ ಒತ್ತು ನೀಡಿದ್ದೇವೆ ಎನ್ನುವುದು ಢೋಂಗಿತನವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು