ಬೆಳಗಾವಿ, ಮಾ.2: ಕಾಂಗ್ರೆಸ್ ಮೊದಲಿನಿಂದಲೂ 500 ರೂ.ಗಳನ್ನು ಕೊಟ್ಟು ಜನರನ್ನು ಸೇರಿಸುತ್ತಿದ್ದು, ಈಗ ಸತ್ಯ ಬಹಿರಂಗವಾಗಿದೆ. ಅದರಲ್ಲಿ ಆಶ್ಚರ್ಯವಿಲ್ಲ. ಇದು ಅವರ ಪರಂಪರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು 500 ರೂ.ಗಳನ್ನು ಕೊಟ್ಟು ಜನರನ್ನು ಕಾರ್ಯಕ್ರಮಗಳಿಗೆ ಕರೆಸಬೇಕು ಎನ್ನುವ ಆಡಿಯೋ ಕುರಿತು ಇಂದು ಸುದ್ದಿಗಾರರಿಗೆ ಬೆಳಗಾವಿಯಲ್ಲ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಮೊದಲಿನಿಂದಲೂ ಅವರದ್ದು ಇದೇ ಪರಿಸ್ಥಿತಿ. ಅವರ ಮಾತುಗಳಿಂದ ಸತ್ಯ ಬಹಿರಂಗವಾಗಿದೆ. ಜನಕ್ಕೆ ಈ ಬಗ್ಗೆ ತಿಳಿಸಿದೆ ಎಂದರು.
ನಮ್ಮ ಹಕ್ಕು
ಸಿದ್ದರಾಮಯ್ಯ ಅವರು ಸರ್ಕಾರ ಕೋಟೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದಿರುವ ಬಗ್ಗೆ ಉತ್ತರಿಸಿ 2013 ರಿಂದ 2018 ರವರೆಗೆ ಅವರ ಆಡಳಿತದಲ್ಲಿ ಈ ಕೋಟೆಯ ಅಭಿವೃದ್ಧಿಗೆ ಒಂದು ನಯಾಪೈಸೆಯನ್ನೂ ಅವರು ಬಿಡುಗಡೆ ಮಾಡಿದ್ದರೆ ಅವರನ್ನೇ ಕರೆದು ಪುನ: ಉದ್ಘಾಟನೆ ಮಾಡಿಸಲಾಗುವುದು. 50 ಲಕ್ಷ ನೀಡಿರುವುದು ನಮ್ಮ ಸರ್ಕಾರ. ಕೆಲಸ ಮಾಡಿದ್ದು ನಾವೇ, ಜನರಿಗೆ ಸಮರ್ಪಣೆ ಮಾಡಿದ್ದೂ ನಾವೇ ಇದು ನಮ್ಮ ಹಕ್ಕು ಎಂದರು.
ಸ್ಥಳೀಯ ಶಾಸಕರನ್ನು ಉದ್ಘಾಟನೆಗೆ ಕರೆದಿಲ್ಲವೆಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಸರ್ಕಾರ ಅನುದಾನ ನೀಡಿದೆ, ಸರ್ಕಾರ ಉದ್ಘಾಟನೆಯನ್ನೂ ಮಾಡುತ್ತದೆ. ಅವರ ಪಕ್ಷದ್ದು ಅವರು ಏನಾದರೂ ಮಾಡಿದರೆ ನಮ್ಮ ತಕರಾರೇನೂ ಇಲ್ಲ. ಎಂದರು.