ಹುಬ್ಬಳ್ಳಿ, ಜ.1: ಹೊಸ ವರ್ಷ ಎಲ್ಲರಿಗೂ ಹರ್ಷ, ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಕರ್ನಾಟಕ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿಯನ್ನು ತರಲಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದರು.
ಕಳಸಾ ಬಂಡೂರಿ: ಲೋಪದೋಷ ಹುಡುಕುವುದು ಕಾಂಗ್ರೆಸ್ ಮನಸ್ಥಿತಿ
ಕಳಸಾ ಬಂಡೂರಿ ಡಿಪಿಆರ್ ಕುರಿತು ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿ, ಯಾವ ವಿಷಯಕ್ಕೆ ನಾವು ಹಾಗೂ ಅವರು ಹೋರಾಟ ಮಾಡಿ ತಾರ್ಕಿಕ ಅಂತ್ಯ ದೊರೆತು ಕೆಲಸ ಮಾಡುವ ಪ್ರಸಂಗ ಬಂದಿದೆ, 25 ವರ್ಷಗಳ ಹೋರಾಟಕ್ಕೆ ವಿಜಯ ದೊರೆತಿದೆ. ಇದರಲ್ಲಿ ಲೋಪದೋಷಗಳನ್ನು ಹುಡುಕುವುದು ಕಾಂಗ್ರೆಸ್ ಮನಸ್ಥಿತಿಯನ್ನು ಅದು ತೋರಿಸುತ್ತದೆ. ಅವರ ಟೀಕೆ ಟಿಪ್ಪಣಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಮ್ಮ ದಾರಿ ಸ್ಪಷ್ಟವಾಗಿದೆ. ಡಿಪಿಆರ್ ಆಗಿದೆ, ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕೆಲಸ ಪ್ರಾರಂಭ ಮಾಡುತ್ತೇವೆ ಎಂದರು.
ಮೀಸಲಾತಿ:ಯಾರಿಗೂ ಅನ್ಯಾಯವಾಗುವುದಿಲ್ಲ
ಮೀಸಲಾತಿ ಬಗ್ಗೆ ಅಂತಿಮ ಆದೇಶ ಬಂದಾಗ ಎಲ್ಲವೂ ತಿಳಿಯುತ್ತದೆ. ಮಧ್ಯಂತರ ಆದೇಶದಲ್ಲಿ ನಮ್ಮ ಸರ್ಕಾರದ ಉದ್ದೇಶ ಹೇಳಿದ್ದು, ಅಂಕಿಅಂಶಗಳು ಅಂತಿಮ ವರದಿಯಲ್ಲಿ ಬರುತ್ತದೆ. ಬಂದ ನಂತರ ಸಂಬಂಧಿಸಿದವರೊಂದಿಗೆ ಚರ್ಚೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಈಗಿರುವ ಹಿಂದುಳಿದ ವರ್ಗಗಳಿಗೆ ಯಾವುದೇ ತೊಂದರೆ ಮಾಡದಂತೆ ಬಹಳ ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಹಿನ್ನೆಡೆಯಾಗಿದ್ದು, ಮಧ್ಯಂತರ ಆದೇಶವನ್ನು ಒಪ್ಪಿಕೊಂಡಿದ್ದೇವೆ. ಅಗತ್ಯ ಬಿದ್ದರೆ ಸ್ಪಷ್ಟೀಕರಣವನ್ನೂ ನೀಡಲಾಗುವುದು. ಅಂತಿಮ ವರದಿ ಬಂದಾಗ ಎಲ್ಲವೂ ಸ್ಪಷ್ಟವಾಗುತ್ತದೆ. ಇದರಲ್ಲಿ ಯಾರಿಗೂ ಅನ್ಯಾಯ ವಾಗುವುದಿಲ್ಲ. ವಿರೋಧ ಪಕ್ಷದ ನಾಯಕರು ಈ ಬೇಡಿಕೆಗಳನ್ನು ತಮ್ಮ ಸರ್ಕಾರ ಇದ್ದಾಗ ಈಡೇರಿಸಲು ಸಾಧ್ಯವಾಗಿರಲಿಲ್ಲ. ನಾವು ಮಾಡುತ್ತಿರುವುದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದರು.