ಹುಬ್ಬಳ್ಳಿ: ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಜನರು ನರಕಸದೃಶ ವಾತಾವರಣದಲ್ಲಿ ಬದುಕುವ ದುರವಸ್ಥೆಯಿತ್ತು. ಈ ಕಾರಣದಿಂದ ಕಾಂಗ್ರೆಸ್ ಅನ್ನು ಜನರು ಮನೆಗೆ ಕಳುಹಿಸಿದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸುರ್ಜೇವಾಲಾ ಪ್ರತ್ಯೇಕ ನರಕ ಸೃಷ್ಟಿ ಮಾಡಬೇಕು ಎಂಬ ಹೇಳಿಕೆಗೆ ಗರಂ ಆದ ಸಿಎಂ ಬೊಮ್ಮಾಯಿ, ಸುರ್ಜೇವಾಲಾಗೆ ಏನು ಗೊತ್ತಿದೆ. ಅವನಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಬೇಜವಾಬ್ದಾರಿ ವಿರೋಧ ಪಕ್ಷ ಆಗಿದೆ. ಜನರಿಗೆ ತಮ್ಮ ಸಾಧನೆ, ನಮ್ಮ ವೈಫಲ್ಯ ತೋರಿಸೋ ಬದಲು ಈ ತರಹ ಮಾತು ಸರಿ ಅಲ್ಲಎಂದರು.
ಮೊದಲು ಕಾಂಗ್ರೆಸ್ ನ ಒಳ ಜಗಳ ಸರಿ ಮಾಡಲಿ. ಆಮೇಲೆ ಕರ್ನಾಟಕದ ಬಗ್ಗೆ ಮಾತಾಡಲಿ. ಜನರಿಗೆ ಅಸುರ ಯಾರು, ದೇವತೆ ಯಾರು ಎಂದು ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಇರುವ ಅಸುರರ ಲಿಸ್ಟ್ ಬಹಳ ದೊಡ್ಡದಿದೆ. 70 ವರ್ಷ ಆಡಳಿತ ಮಾಡಿದ ಪಕ್ಷವನ್ನು ಜನ ಕಿತ್ತು ಒಗೆದಿದ್ದಾರೆ. ಕಾಂಗ್ರೆಸ್ ಚುನಾವಣೆಗೋಸ್ಕರ ಜನರಿಗೆ ಮರಳು ಮಾಡುತ್ತಿದೆ. ಅವರಿಗೂ ನಮಗೂ ಬಹಳ ವ್ಯತ್ಯಾಸ ಇದೆ. ನಾವು ಯಾಕೆ, ಯಾರಿಗೆ ಹಣ ಕೊಡ್ತೀವಿ ಅನ್ನೋದನ್ನ ಹೇಳಿದ್ದೇವೆ. ಸುರ್ಜೇವಾಲಾಗೆ ಸ್ವಲ್ಪ ನೆನೆಪಿನ ಶಕ್ತಿ ಕಡಿಮೆ ಇದೆ ಎಂದು ತಿಳಿಸಿದರು.
ಬಜೆಟ್ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗವುದು. ಮಹದಾಯಿ ವಿಚಾರ ಕಾದು ನೋಡಿ. ಮಹದಾಯಿ ಅಂತಿಮ ಹಂತದಲ್ಲಿದೆ. ಜನರು ಕಾಂಗ್ರೆಸ್‌ಗೆ ಶಾಶ್ವತವಾಗಿ ಹೂ ಇಡುತ್ತಾರೆ. ಚುನಾವಣೆ ಆದ ಮೇಲೂ ಕಾಂಗ್ರೆಸ್ ಕಿವಿ ಮೇಲೆ ಹೂ ಇರುತ್ತದೆ. ನಿತೀಶ್ ಕುಮಾರ್ ಬಗ್ಗೆ ಎಲ್ಲರಿಗೂ ಗೊತ್ತಿರೋ ವಿಚಾರ. ಎಷ್ಟ ಸಲ ಬಣ್ಣ ಬದಲಾಯಿಸಿದ್ದಾರೆ ಅನ್ನೋದು ಗೊತ್ತಿದೆ. ಬಣ್ಣ ಬದಲಾಯಿಸೋರ ಬಗ್ಗೆ ನಾನು ಮಾತಾಡಲ್ಲ ಎಂದರು.