ಧಾರವಾಡ: ಸರ್ಕಾರಿ ಶಾಲೆಗೆ 157 ವರ್ಷ ಎಂದರೆ ಈ ಶಾಲೆಯಿಂದ ಎಷ್ಟು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೂಡುಗೆ ನೀಡಿದೆ ಎಂದರೆ ಇದು ಇತಿಹಾಸದಲ್ಲಿ ನೆನಪಿಡಬೇಕಾದದ್ದು. ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಿಂದ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಆಗುತ್ತದೆ. ಶಾಲೆಯಲ್ಲಿ ಕೌಶಲ್ಯ ಕಲಿಸುವ ಅಗತ್ಯವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಉಪ್ಪಿನಬೇಟಗೇರಿ ಸರಕಾರಿ ಮಾದರಿ ಮಕ್ಕಳ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲೆಯ ಶತಮಾನೋತ್ತರ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರ ಕೌಶಲ್ಯ ಬೆಳವಣಿಗೆ ಅವಶ್ಯಕತೆ ಇರುವ ಅಂಶಗಳನ್ನು ಅಳವಡಿಕೆ ಮಾಡಿದೆ. ಜಗತ್ತಿನಲ್ಲಿ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ದೇಶ ಭಾರತವಾಗಿದೆ, ದೇಶದಲ್ಲಿ ಶೇ. 65 ರಷ್ಟು ಯುವಜನರು ಇದ್ದಾರೆ. ನಮ್ಮ ದೇಶದಲ್ಲಿ ವಯಸ್ಸಾದ ವೃದ್ದರು ಸಹ ದುಡಿಮೆ ಮಾಡುತ್ತಾರೆ. ದೇಶದ ಬೆಳವಣಿಗೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ಬೆಳೆಸಬೇಕಾಗಿದೆ. ಅದಕ್ಕಾಗಿಯೇ ಎನ್. ಇ. ಪಿ. ಅಳವಡಿಕೆ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ನಮ್ಮ ದೇಶದಲ್ಲಿ ಅನೇಕ ಉನ್ನತ ವಿಶ್ವವಿದ್ಯಾಲಯಗಳು ಇದ್ದವು. ನಳಂದ, ತಕ್ಷಶಿಲಾ, ವಾರಾಣಸಿ ಇವು ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಾಗಿದ್ದವು. ನಮ್ಮ ಕೇಂದ್ರ ಸರ್ಕಾರವು ಬಡವರ ಹಿತಕ್ಕಾಗಿ, ದೇಶದ ಸುರಕ್ಷತೆಗಾಗಿ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ. ಹರ್ ಘರ್ ಜಲ್ ಎಂಬ ಯೋಜನೆಯು ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಪ್ರಪಂಚದಲ್ಲಿ ಇತರೆ ದೇಶಗಳನ್ನು ನೋಡಿದರೆ ಕೋವಿಡ್ ನಂತರ ಆರ್ಥಿಕತೆ ದಾರಿ ತಪ್ಪಿದೆ. ಆದರೆ ನಮ್ಮ ದೇಶವು ಆರ್ಥಿಕತೆಯಲ್ಲಿ ಬ್ರಿಟನ್ ನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಉಪ್ಪಿನ ಬೆಟ್ಟಗೇರಿ ಗ್ರಾಮದಲ್ಲಿ 15 ಕೋಟಿ ಅನುದಾನದ ಕೆಲಸಗಳು ನಡೆಯುತ್ತಿವೆ ಮತ್ತು ನಮ್ಮ ಧಾರವಾಡ ಲೋಕಸಭಾ ವ್ಯಾಪ್ತಿಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಾಗಿರುತ್ತೇವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಉಪ್ಪಿನ ಬೆಟಗೇರಿ ಮಾದರಿ ಗಂಡು ಮಕ್ಕಳ ಶಾಲೆಯು ದೇಶಕ್ಕೆ ಮತ್ತು ನಾಡಿಗೆ ಉತ್ತಮ ಕಾಣಿಕೆ ನೀಡಿದೆ. ಮುಖ್ಯವಾಗಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕಿತ್ತು. ಇನ್ನು ದೇಶ ತುಂಬಾ ಪ್ರಗತಿ ಕಾಣುತಿತ್ತು. ಸಾವಿತ್ರಿಬಾಯಿ ಅವರಂತೆ ಉತ್ತಮ ಶಿಕ್ಷಕಿಯಾಗಿ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ. 157 ವರ್ಷ ಪೂರೈಸಿದ ಸವಿ ನೆನಪಿಗಾಗಿ ಮತ್ತೊಂದು ಕಟ್ಟಡವನ್ನು ನಿರ್ಮಾಣ ಮಾಡೋಣ, ಈ ಶಾಲೆಯ ದೊಡ್ಡ ಸಾಧನೆ ಇದು. ಶಾಲೆಯಲ್ಲಿ ತಂದೆ, ತಾಯಿ, ಕುಟುಂಬ, ಸಮಾಜ ಹಾಗೂ ಸಂಸ್ಕಾರದ ಬಗ್ಗೆ ಕಲಿಸಬೇಕು. ರ್ಯಾಂಕ ಬರುವುದು ಮುಖ್ಯವಲ್ಲ ಸಂಸ್ಕಾರ ಕಲಿಯುದು ಮುಖ್ಯ ಮನೆಯೇ ಮೊದಲ ಪಾಠ ಶಾಲೆ. ಸಂಸ್ಕಾರ ಮತ್ತು ಶಿಕ್ಷಣ ಜೀವನಕ್ಕೆ ಆಧಾರ. ರಾಜ್ಯಕ್ಕೆ ಉತ್ತಮ ಮಾದರಿ ಶಾಲೆ ಆಗಲಿ ಎಂದು ಅವರು ಹೇಳಿದರು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಅಧ್ಯಕ್ಷೆತೆ ವಹಿಸಿ, ಮಾತನಾಡಿದರು. ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ ಮತ್ತು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶತಮಾನೋತ್ತರ ಸುವರ್ಣ ಮಹೋತ್ಸವ ಸಮಿತಿಯ ಸದಸ್ಯರು ಮತ್ತು ಇನ್ನಿತರ ಗಣ್ಯರು ಕಾರ್ಯಜ್ರಮದಲ್ಲಿ ಉಪಸ್ಥಿತರಿದ್ದರು.