ಧಾರವಾಡ: ತಮ್ಮ ವಾರ್ಡಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗದೇ ಇರುವುದರಿಂದ ರೋಸಿ ಹೋದ ಜನ ಗ್ರಾಮ ಪಂಚಾಯ್ತಿಗೆ ಎತ್ತುಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಬ್ಬಳ್ಳಿ ಗ್ರಾಮದ ಏಳನೇ ವಾರ್ಡಿನಲ್ಲಿ ಕಳೆದ 17 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಈ ಸಂಬಂಧ ಪಂಚಾಯ್ತಿಗೆ ತಮ್ಮ ಅಳಲು ಹೇಳಿಕೊಳ್ಳಲು ಹೋದಾಗ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತನ್ವಿರ್ ಎಂಬುವವರು, ಈ ಸಮಸ್ಯೆ ನಮಗೆ ಸಂಬಂಧವಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದರಿಂದ ಕಂಗಾಲಾದ ಜನ ಪಿಡಿಓ ಅವರನ್ನೇ ಹೊರಗೆ ಹಾಕಿ ಪಂಚಾಯ್ತಿಗೆ ಬೀಗವನ್ನೂ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಪಂಚಾಯ್ತಿ ಆವರಣದಲ್ಲಿ ಎತ್ತುಗಳನ್ನು ಕಟ್ಟಿ, ಸೋಮವಾರ ಆಗಿದ್ದರಿಂದ ಅಲ್ಲೇ ಎತ್ತುಗಳ ಮೈ ತೊಳೆದಿದ್ದಾರೆ. ಅಲ್ಲದೇ ಅಲ್ಲೇ ಅವುಗಳಿಗೆ ಮೇವು ಹಾಕಿ ಆ ಮೂಲಕ ಪಿಡಿಓ ಅವರ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.