ಹುಬ್ಬಳ್ಳಿ: ಸುಮಾರು ನಾಲ್ಕು ದಶಕಗಳ ಬೇಡಿಕೆಯಾದ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ, ಸಾಮಾಜಿಕ ನ್ಯಾಯ ಹಾಗೂ ಸರ್ಕಾರದ ಹಲವು ಸೌಕರ್ಯಗಳಿಗೆ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ಜಾರಿಗೆ ತರಲು ಹೋರಾಟ ನಡೆಸಲಾಗಿತ್ತು.
ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೀಸಲಾತಿ ನೀಡುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕುರಿತು, ಒಳ ಮೀಸಲಾತಿ ಸಮುದಾಯದ ನಾಯಕರು ಹುಬ್ಬಳ್ಳಿಯ ಸಿಎಂ ನಿವಾಸದಲ್ಲಿ ವಿಜಯೋತ್ಸವ ಆಚರಣೆ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ ಕೊಂಡಪಲ್ಲಿ ಅವರು, ಶತಮಾನಗಳಿಂದ ಅಸ್ಪ್ರಶ್ಯತೆಯಲ್ಲಿ ಬೆಂದ ಅತ್ಯಂತ ಶೋಷಿತರು, ಅತ್ಯಂತ ತುಳಿತಕ್ಕೊಳಗಾದ ಮೂಲ ಪರಿಶಿಷ್ಟರಾದ ಮಾದಿಗ, ಛಲವಾದಿ, ಸಮಗಾರ, ಡೋಹರ ಮತ್ತು ಮೋಚಿಗಾರ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯಗಳು ಸಿಗದೇ, ವಂಚಿತರಾಗಿದ್ದನ್ನು ಮನಗಂಡು ಮತ್ತು ಸುಮಾರು ಮೂರು ದಶಕಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟವನ್ನು ಮನ್ನಿಸಿ, ಬಿಜೆಪಿ ಆಡಳಿತದ ಕರ್ನಾಟಕ ಸರಕಾರ ಕೊನೆಗೂ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿಗೆ ತಂದಿರುವುದನ್ನು ಹುಬ್ಬಳ್ಳಿಯ ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟದ ವತಿಯಿಂದ, ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷೋದ್ಗಾರದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಅಭಿನಂದನೆ ಸಲ್ಲಿಸಿದರು.