ಧಾರವಾಡ: ದಾಖಲೆ ಇಲ್ಲದೇ ಸಾಗಾಟ ಮಾಡಲಾಗುತ್ತಿದ್ದ ಅಂದಾಜು 25 ಲಕ್ಷ ರೂಪಾಯಿ ಮೌಲ್ಯದ 12 ಸಾವಿರ ಸೀರೆಗಳನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ, ಧಾರವಾಡ ಬೈಪಾಸ್‌ನಲ್ಲಿರುವ ಇಟಿಗಟ್ಟಿ ಬಳಿ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ವೇಳೆ ಲಾರಿ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ.
ಲಾರಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅದನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ದಾಖಲೆ ಇಲ್ಲದ ಸೀರೆಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ರಾಮದುರ್ಗದಿಂದ ಬೆಂಗಳೂರಿಗೆ ಈ ಸೀರೆಗಳನ್ನು ಸಾಗಿಸಲಾಗುತ್ತಿತ್ತು ಎಂದು ಗೊತ್ತಾಗಿದೆ. ಸದ್ಯ ವಿಧಾನಸಭಾ ಚುನಾವಣೆ ಇರುವುದರಿಂದ ಈ ರೀತಿ ಸೀರೆಗಳನ್ನು ಮತದಾರರಿಗೆ ಹಂಚಲು ಕೊಂಡೊಯ್ಯಲಾಗುತ್ತಿತ್ತು ಎಂದು ಊಹಿಸಲಾಗಿದೆ. 20 ಮಹಿಳೆಯರ ಹೆಸರಿನಲ್ಲಿ ಬಿಲ್ ಹಾಕಲಾಗಿದ್ದು, ಆ ಹೆಸರುಗಳು ನಕಲಿ ಇವೆ ಎಂಬ ಆಧಾರದ ಮೇಲೆ ಪೊಲೀಸರು ಲಾರಿ ಸಮೇತ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.