News Karnataka Kannada
Friday, March 29 2024
Cricket
ಹುಬ್ಬಳ್ಳಿ-ಧಾರವಾಡ

ಧಾರವಾಡ: ವಾರ್ತಾ ಇಲಾಖೆಯ ಸಿಬ್ಬಂದಿಗಳ ಕಾಯಕದ ಉತ್ಸುಕತೆ ನಮಗೆ ಮಾದರಿ -ಪಿ.ಎಸ್.ಪರ್ವತಿ

The enthusiasm of the staff of the information department is a role model for us: P.S. Parvathi
Photo Credit : News Kannada

ಧಾರವಾಡ: ವಾರ್ತಾ ಇಲಾಖೆಯ ಸಿಬ್ಬಂದಿಗಳ ಕಾಯಕದ ಉತ್ಸುಕತೆ ನಮಗೆ ಮಾದರಿಯಾಗಿದೆ. ಸಿ.ಬಿ.ಭೋವಿ ಹಾಗೂ ಎ.ಎಚ್. ನದಾಫ್ ಅವರು 20 ವರ್ಷಗಳ ಕಾಲ ನನ್ನ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜೀವನದ ಎಲ್ಲ ಘಟನೆಗಳಲ್ಲಿ ನನ್ನ ಜೊತೆಗೆ ಇದ್ದರು. ಇಂತಹ ಸಹೋದ್ಯೋಗಿಗಳು ಇದ್ದರೆ ಕೆಲಸ ಮಾಡುವುದು ಸುಲಭ ಎಂದು ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕರಾದ ಪಿ.ಎಸ್.ಪರ್ವತಿ ಅವರು ಹೇಳಿದರು.

ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದ ಬಿಳ್ಕೋಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಲ್ಲ ಕಾರ್ಯಕ್ರಮಗಳ ವರದಿಯನ್ನು ಸಹ ಮಾಡುವ ಮಟ್ಟಕ್ಕೆ ಅವರು ಬೆಳೆದರು. ಅವರ ವಿಶ್ವಾಸದ ಮೇಲೆ ಕೆಲಸವನ್ನು ಮಾಡಲು ಬಿಡಲಾಗುತ್ತಿತ್ತು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇಬ್ಬರಿಗೂ ದೇವರು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವೆ ಎಂದರು.

ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ, ಸುಮಾರು 37 ವರ್ಷಗಳ ಸೇವೆ ಸಲ್ಲಿಸಿದ ಸಿ.ಬಿ.ಭೋವಿ ಹಾಗೂ ಎ.ಎಚ್. ನದಾಫ್ ಅವರಿಗೆ ಆಯುಷ್ಯ ಆರೋಗ್ಯ ದೇವರು ನೀಡಲಿ. ಗದಗನಲ್ಲಿ ಸೇವೆ ಸಲ್ಲಿಸುವಾಗ ಭೋವಿ ಅವರ ಕಾರ್ಯ ವೈಖರಿ ತೃಪ್ತಿದಾಯಕವಾಗಿತ್ತು. ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅವರ ಕೆಲಸ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಅವರು ಕಚೇರಿಗೆ ಮಾರ್ಗದರ್ಶನ ಮಾಡಲಿ ಎಂದರು.

ಸೇವಾ ನಿವೃತ್ತಿ ಹೊಂದಿದ ಪ್ರಥಮ ದರ್ಜೆ ಸಹಾಯಕರಾದ ಸಿ.ಬಿ.ಭೋವಿ ಅವರು ಮಾತನಾಡಿ, ಸರ್ಕಾರಿ ನೌಕರರ ವಯಸ್ಸು ನಿಲ್ಲುವುದಿಲ್ಲ, ಸದಾ ಕೆಲಸದಲ್ಲಿ ಮಗ್ನರಾಗಬೇಕು. 1986 ರಲ್ಲಿ ಬೆಳಗಾವಿಯಲ್ಲಿ ಮೊದಲ ಬಾರಿಗೆ ಸರ್ಕಾರಿ ಕೆಲಸಕ್ಕೆ ಸೇರಿಕೊಂಡೆ. ಈಗಿನ ಹಾಗೆ ಮೊಬೈಲ್ ಇರಲಿಲ್ಲ. ಸುದ್ದಿ ಕಳಿಸುವುದು ಅಷ್ಟು ಸುಲಭವಾಗಿ ಇರಲಿಲ್ಲ. ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳು ಬೇರೆಯಾಗಿರಲಿಲ್ಲ. ಟ್ರಂಕ್ ಕಾಲ್ ಬುಕ್ ಮಾಡಬೇಕಾಗುತ್ತಿತ್ತು. ಎಲ್ಲ ಅಧಿಕಾರಿಗಳು ಕೆಲಸದಲ್ಲಿ ನನಗೆ ಉತ್ತಮ ಸಹಾಯ ಸಹಕಾರ ನೀಡುತ್ತಿದ್ದರು.

ಕಚೇರಿಯ ಬಿಲ್ಲುಗಳನ್ನು ಅಚ್ಚುಕಟ್ಟಾಗಿ ಮಾಡಬೇಕಾಗಿತ್ತು. ಕೆಲಸ ಮಾಡುವಾಗ ಯಾವುದೇ ಕೆಲಸವನ್ನು ಸಹ ತಿರಸ್ಕಾರ ಭಾವದಿಂದ ಬಿಡುತ್ತಿರಲಿಲ್ಲ. ಗೊತ್ತಿಲ್ಲದ ಕೆಲಸವನ್ನು ಸಹ ತಿಳಿದುಕೊಂಡು ಮಾಡುತ್ತಿದ್ದೆ. ಸಚಿವರ ಕಾರ್ಯಕ್ರಮಗಳು, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ, ನ್ಯಾಯಾಲಯ ಸೇರಿದಂತೆ ಇತರ ಇಲಾಖೆಗಳ ಸುದ್ದಿಗಳಿಗೆ ಹೋಗುತ್ತಿದ್ದೆ. ಜನೇವರಿ 26, ಆಗಸ್ಟ್ 15 ಹಾಗೂ ನವೆಂಬರ್ 1 ರ ಭಾಷಣಗಳನ್ನು ಸಿದ್ಧಪಡಿಸುವ ಹೊಣೆ ನಮ್ಮ ಮೇಲಿತ್ತು. ಅದನ್ನು ಸಹ ಉತ್ತಮ ರೀತಿಯಲ್ಲಿ ಮಾಡಲಾಗುತ್ತಿತ್ತು. ಕೆಲಸವನ್ನು ಪ್ರೀತಿಯಿಂದ ಮಾಡಬೇಕು. ಕೆಲಸವನ್ನು ನಾವು ಪ್ರೀತಿಸಬೇಕು ಎಂದು ತಮ್ಮ ಸೇವಾನುಭವವನ್ನು ಹಂಚಿಕೊಂಡರು.

ವಾರ್ತಾ ಇಲಾಖೆಯ ನೌಕರರಾದ ಎ.ಎಚ್. ನದಾಫ್ ಅವರು ಮಾತನಾಡಿ, 1994 ರಲ್ಲಿ ಬೆಳಗಾವಿಯಲ್ಲಿ ಸರ್ಕಾರಿ ನೌಕರಿಗೆ ಸೇರಿದೆ. ವಾರ್ತಾ ಇಲಾಖೆ ಸಿಕ್ಕಿದ್ದು ನನ್ನ ಭಾಗ್ಯ. ಎಲ್ಲ ಅಧಿಕಾರಿಗಳು ನನಗೆ ಆತ್ಮೀಯರಾಗಿದ್ದರು ಎಂದು ಅವರು ಸೇವಾನುಭವವನ್ನು ಮೆಲುಕು ಹಾಕಿದರು.

ಧಾರವಾಡ ಜರ್ನಲಿಸ್ಟ್ ಗಿಲ್ಡ್‍ನ ಅಧ್ಯಕ್ಷರಾದ ಬಸವರಾಜ ಹೊಂಗಲ ಮಾತನಾಡಿ, ಸೇವಾ ನಿವೃತ್ತಿ ಹೊಂದುವುದು ಸಹಜ ಪ್ರಕ್ರಿಯೆ. ನಿವೃತ್ತಿ ನಂತರದ ಜೀವನ ಅತ್ಯಂತ ಸುಂದರ ಜೀವನವಾಗಿದೆ. ಬೆಂಗಳೂರಿಗಿಂತ ಧಾರವಾಡದ ಅಧಿಕಾರಿಗಳು ಅವಿನಾಭಾವ ಸಂಬಂಧ ಹೊಂದಿದ್ದರು. ಬೆಳಗಾವಿ ಅಧಿವೇಶನದಲ್ಲಿ ನದಾಫ್ ಅವರ ಕಾಯಕ ಮೆಚ್ವುವಂತಾದಾಗಿತ್ತು. ಅವರ ಕೆಲಸವನ್ನು ಬೆಂಗಳೂರಿನ ಪತ್ರಕರ್ತರು ಕೊಂಡಾಡುತ್ತಿದ್ದರು. ಭೋವಿ ಅವರ ಜೀವನ ಸ್ಪೂರ್ತಿಯನ್ನು ನಾವು ಅಳವಡಿಸಿಕೊಳ್ಳಬೇಕು. ಕೆಲಸದ ಒತ್ತಡ ಎಲ್ಲರಿಗೂ ಇರುತ್ತದೆ. ಅದರ ನಡುವೆಯೂ ಅತ್ಯುತ್ತಮ ಕಾರ್ಯ ಮಾಡುತ್ತಿದ್ದರು. ಜನರ ಬಾಯಲ್ಲಿ ನಾವು ಮಾಡಿದ ಕೆಲಸ ಮಾತನಾಡಬೇಕು. ಅವರು ಒದಗಿಸಿದ ಕೆಲಸಕ್ಕೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಿದ್ದಾರೆ ಎಂದು ತಿಳಿಸಿದರು.

ಹುಬ್ಬಳ್ಳಿ ಪ್ರತಕರ್ತ ಸಂಘದ ಅಧ್ಯಕ್ಷರಾದ ಗಣಪತಿ ಗಂಗೊಳ್ಳಿ ಮಾತನಾಡಿ, ಪಿಟಿಐ ಸುದ್ದಿಗಳಿಗೆ ವಾರ್ತಾ ಇಲಾಖೆಯನ್ನೇ ಅವಲಂಭಿಸಬೇಕಾಗಿತ್ತು. ಇಬ್ಬರ ಜೊತೆ ಸಂಬಂಧ ಹೊಂದಿದೆ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸುವೆ ಎಂದರು.

ಪತ್ರಕರ್ತರಾದ ವೆಂಕನಗೌಡ ಪಾಟೀಲ ಅವರು ಮಾತನಾಡಿ, ಸಿ.ಬಿ.ಭೋವಿ ಹಾಗೂ ಎ.ಎಚ್. ನದಾಫ್ ಅವರೊಡನೆ ಹಲವಾರು ಪತ್ರಕರ್ತರು ಅನೋನ್ಯ ಭಾವವನ್ನು ಹೊಂದಿದ್ದರು. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದರು. ಅವರೊಡನೆ ಆತ್ಮೀಯ ಸಂಬಂಧವನ್ನು ಹೊಂದಿದ್ದೇವೆ. ಜೀವನದ ಸ್ವಾರಸ್ಯಕರ ವಿಷಯಗಳನ್ನು ಮೆಲುಕು ಹಾಕುತ್ತಿದ್ದರು. ನದಾಫ್ ಅವರು ಬಹಳ ತಾಳ್ಮೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಭೋವಿ ಅವರು ಜೀವನದ ಪಾಠಗಳನ್ನು ಮನಕ್ಕೆ ಮುಟ್ಟುವ ನಿಟ್ಟಿನಲ್ಲಿ ತಿಳಿ ಹೇಳುತ್ತಿದ್ದರು. ಸ್ನೇಹಜೀವಿಗಳು ವೃತ್ತಿಯಿಂದ ನಿವೃತ್ತರಾಗಿದ್ದು, ಅವರ ಮುಂದಿನ ಜೀವನ ಸಂತೋಷಕರವಾಗಿರಲಿ ಎಂದು ಹಾರೈಸಿದರು.

ಪತ್ರಕರ್ತರಾದ ಜಾವೇದ ಅಧೋನಿ ಅವರು ಮಾತನಾಡಿ, ವಾರ್ತಾ ಇಲಾಖೆಯೊಂದಿಗೆ ದಿನಾಲೂ ಒಡನಾಟ ಹೊಂದಿರಬೇಕಾಗಿರುತ್ತದೆ. ಒಂದಿಲ್ಲೊಂದು ಮಾಹಿತಿಯನ್ನು ಅವರಿಂದ ಪಡೆದುಕೊಳ್ಳಬೇಕು. ಹೀಗಾಗಿ ವಾರ್ತಾ ಇಲಾಖೆ ನಮ್ಮ ವೃತ್ತಿ ಜೀವನದ ಭಾಗವಾಗಿದೆ ಎಂದು ಹೇಳಿದರು.

ವಾರ್ತಾ ಇಲಾಖೆಯ ವಾಹನ ಚಾಲಕರಾದ ರಾಮಚಂದ್ರ ಉಕ್ಕಲಿ ಅವರು ಮಾತನಾಡಿ, ಈಗಿನ ಹಾಗೆ ವಾರ್ತಾ ಇಲಾಖೆಯ ಕೆಲಸ ಸುಲಭವಾಗಿರಲಿಲ್ಲ. ಗದಗ, ಬೆಳಗಾವಿಯಲ್ಲಿ ಅವರೊಂದಿಗೆ ಸೇವೆ ಸಲ್ಲಿಸಿರುವೆ ಎಂದರು.

ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ಪವಿತ್ರಾ ಬಾರಕೇರ, ಭಾರತಿ ಮಟ್ಟಿ, ಸಂಗಪ್ಪ ಯರಗುದ್ದಿ, ಮಲ್ಲಿಕಾರ್ಜುನ ಕಂಪ್ಲಿ, ಮಹ್ಮದ್ ಷರೀಫ್ ಚೋಪದಾರ್, ಶಿವು ಭೋವಿ, ಪ್ರಶಾಂತ ಕಾಳೆ, ದೇವರಾಜ ಸೇರಿದಂತೆ ಪತ್ರಕರ್ತರು ಹಾಜರಿದ್ದರು. ವಾರ್ತಾ ಇಲಾಖೆಯ ವಿನೋದಕುಮಾರ .ಡಿ. ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು