News Kannada
Tuesday, September 26 2023
ಹುಬ್ಬಳ್ಳಿ-ಧಾರವಾಡ

ಬಾಲಕಾರ್ಮಿಕ ನಿಷೇಧ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು : ಶಿವಾನಂದ ಭಜಂತ್ರಿ

FIR should be lodged against violators of Child Labour Prohibition Act: Shivanand Bhajantri
Photo Credit : News Kannada

ಧಾರವಾಡ: ಬಾಲ ಕಾರ್ಮಿಕ ನಿಷೇಧ ಕಾಯ್ದೆ ಅರಿವಿಲ್ಲದೆ ಅನೇಕ ವ್ಯಾಪಾರಿಗಳು, ಉದ್ಯಮಿಗಳು ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಅಂತವರ ವಿರುದ್ಧ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿಮಾಡಿ, ಸಲ್ಲಿಸುವ ವರ್ತಮಾನ ವರದಿ ಆಧರಿಸಿ ತಕ್ಷಣ ಪೊಲೀಸರು ಎಫ್‍ಐಆರ್ ದಾಖಲಿಸಬೇಕು. ವಿಳಂಬ ಸಹಿಸಲಾಗದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ತಿಳಿಸಿದರು.

ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ, ಧಾರವಾಡ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳು ಬಾಲ ಕಾರ್ಮಿಕರು ಇರುವ ಕಡೆ ಅನಿರೀಕ್ಷಿತ ದಾಳಿ ಮಾಡಿ ಮಕ್ಕಳನ್ನು ರಕ್ಷಿಸುತ್ತಾರೆ. ಮಕ್ಕಳನ್ನು ದುಡಿಮೆಗೆ ನೇಮಿಸಿಕೊಂಡವರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಅಧಿಕಾರಿಗಳನ್ನು ಕಾಯಿಸುವ ಅಥವಾ ವಿಳಂಬ ಮಾಡುವುದನ್ನು ಸಹಿಸಲಾಗದು. ಇಂತಹ ಪೊಲೀಸ್ ಠಾಣೆ ಅಧಿಕಾರಿಗಳ ಬಗ್ಗೆ ಬಾಲಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಅವರು ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ವ್ಯಾಪಾರಿ, ಉದ್ದಿಮೆದಾರ ಹಾಗೂ ಟ್ರೇಡ್ ಲೈಸನ್ಸ್ ಪಡೆದವರು ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿಲ್ಲವೆಂದು ಕಡ್ಡಾಯವಾಗಿ ಮುಚ್ಚಳಿಕೆ ಬರೆದುಕೊಡಬೇಕು. ಅಂಗಡಿ ಅಥವಾ ವ್ಯಾಪಾರ ಸ್ಥಳದಲ್ಲಿ ಬಾಲಕಾರ್ಮಿಕರ ನೇಮಕ ಕಾಯ್ದೆ ಮತ್ತು ಶಿಕ್ಷೆಯ ಬಗ್ಗೆ ಫಲಕ ಹಾಕಬೇಕು. ಈ ಕುರಿತು ಅಧಿಕಾರಿಗಳು ಪರಿಶೀಲಿಸಬೇಕೆಂದು ಅವರು ಹೇಳಿದರು.

ಬರುವ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಜಾಥಾ, ಉಪನ್ಯಾಸ, ಸಾಧಕರಿಗೆ ಗೌರವ, ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

ಸಾರ್ವಜನಿಕ ಸ್ಥಳ ಹಾಗೂ ಕೈಗಾರಿಕಾ ವಲಯ, ಹೋಟೆಲ್ ಹಾಗೂ ಸಣ್ಣ ಉದ್ದಿಮೆದಾರರಲ್ಲಿ ಬಾಲಕಾರ್ಮಿಕ ನಿಷೇಧದ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕೆಂದು ಅವರು ತಿಳಿಸಿದರು.

ಬಾಲಕಾರ್ಮಿಕ ಯೋಜನಾ ಸಂಘದ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಸಂಗಮ ಅವರು ಮಾತನಾಡಿ, ಬಾಲಕಾರ್ಮಿಕ ಪತ್ತೆ ಹಾಗೂ ಅವರಿಗೆ ಶಿಕ್ಷಣ, ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಇತರ ಇಲಾಖೆಗಳ ಸಹಯೋಗದಲ್ಲಿ ಉತ್ತಮವಾಗಿ ಮಾಡಲಾಗುತ್ತಿದೆ. ಕಳೆದ ವರ್ಷ 214ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ರಕ್ಷಿಸಿ, ಶಾಲೆಗಳಿಗೆ ದಾಖಲಿಸಲಾಗಿದೆ. ಸುಮಾರು 18ಕ್ಕೂ ಹೆಚ್ಚು ಅಂಗಡಿ, ಸಂಸ್ಥೆ, ಉದ್ದಿಮೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಬಾಲ ಹಾಗೂ ಕಿಶೋರ ನಿಷೇಧ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಹಕಾರ ಅಗತ್ಯವಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತೆ ತಿಳಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಮಹಾನಗರ ಪಾಲಿಕೆ ಅಧಿಕಾರಿ ಆರ್.ಎಂ.ಕುಲಕರ್ಣಿ, ಹೆಸ್ಕಾಂ ಇಇ ಎಂ.ಎಂ.ನದಾಫ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಎಚ್.ಎಚ್.ಕುಕನೂರ, ಪೊಲೀಸ್ ಅಧಿಕಾರಿ ಬಾಬಾಸಾಹೇಬ ಹುಲ್ಲಣ್ಣವರ ಸಭೆಯಲ್ಲಿ ಮಾತನಾಡಿದರು.

See also  ಮಂಗಳೂರು: ಪ್ರಧಾನಿ ಮೋದಿ ಭೇಟಿ, ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ ಕೇಸರಿ ಧ್ವಜ!

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾಧಿಕಾರಿ ಬಸವರಾಜ ಪಂಚಾಕ್ಷರಿಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಕಾರ್ಮಿಕ ಅಧಿಕಾರಿಗಳಾದ ಲಲಿತಾ ಸಾತೇನಹಳ್ಳಿ, ಮಾರಿಕಾಂಬಾ ಹುಲಕೋಟಿ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಅಕ್ರಂ ಅಲ್ಲಾಪುರ, ಅಶೋಕ ಒಡೆಯರ, ಭುವನೇಶ್ವರಿ ಕೋಟಿಮಠ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಗೋಪಾಲ ಲಮಾಣಿ, ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್‌ ಪ್ರದೀಪ ಪಾಟೀಲ ಸೇರಿದಂತೆ ಇತರರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು