ಬೆಂಗಳೂರು: ಉದ್ಯೋಗ ಸೃಷ್ಟಿಮಾಡುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯ ಇರುವ ಆಭರಣ ಪಾರ್ಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಅರಮನೆ ಮೈದಾನದಲ್ಲಿ ಆರಂಭವಾಗಿರುವ ‘ಸೌತ್ ಇಂಡಿಯಾ ಜ್ಯುವೆಲ್ಲರಿ ಶೋ’ ಉದ್ಘಾಟಿಸಿ ಮಾತನಾಡಿದ ಅವರು, ‘ಕೌಶಲ ಬೇಡುವ ಆಭರಣ ಉದ್ದಿಮೆ ಕ್ಷೇತ್ರ ಉದ್ಯೋಗ ಸೃಜನೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಆಭರಣ ಉತ್ಪಾದನೆಗೆ ಪೂರಕವಾಗಿ ಆಧುನಿಕ ತಂತ್ರಜ್ಞಾನವೂ ಅಗತ್ಯ. ಈ ಆಶಯದಡಿ ಪಾರ್ಕ್ ನಿರ್ಮಾಣ ಮಾಡಲು ಬೇಕಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ’ ಎಂದು ಆಭರಣ ತಯಾರಕರ ಸಂಘಕ್ಕೆ ಸೂಚಿಸಿದರು.
ಭಾರತೀಯ ಶೈಲಿಯ ಆಭರಣಗಳ ವಹಿವಾಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಮಾಡಬೇಕಾಗಿದೆ. ಚಿನ್ನ ನಿಯಂತ್ರಣ ಕಾಯ್ದೆ ತೆಗೆದುಹಾಕಿದ ನಂತರ ಮುಕ್ತ ವಾತಾವರಣ ನಿರ್ಮಾಣವಾಗಿದೆ. ಚಿನ್ನದ ವ್ಯಾಪಾರ ಉದ್ದಿಮೆಯಾಗಿ ಬೆಳೆದಿದೆ ಎಂದೂ ಅವರು ಹೇಳಿದರು.