ಹುಬ್ಬಳ್ಳಿ: ಕಳೆದ ವರ್ಷ ನೀಡಲಾಗಿದ್ದ ನಿಯಮದಂತೆ ಈ ಬಾರಿಯೂ ಗಣೇಶ ಹಬ್ಬಾಚರಣೆಗೆ ಅನುಮತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಗಣೇಶೋತ್ಸವ ಆಚರಣೆ ಕುರಿತು ಈಗಾಗಲೇ ಹೇಳಿದಂತೆ ಸೆ. 5 ರಂದು ತಜ್ಞರು ವರದಿ ಸಲ್ಲಿಸುತ್ತಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಭಿನ್ನವಾಗಿ ಹಬ್ಬ ಆಚರಿಸಲಾಗುತ್ತದೆ. ತಜ್ಞರು ಸಹ ಆಯಾ ಜಿಲ್ಲೆಯಲ್ಲಿ ವರದಿ ಸಲ್ಲಿಸಲು ಕಾಲಾವಕಾಶ ಕೇಳಿದ್ದಾರೆ ಎಂದರು.
ಕಳೆದ ವರ್ಷ ಯಾವ ರೀತಿ ನಿಯಮನುಸಾರ ಗಣೇಶೋತ್ಸವ ಆಚರಿಸಲಾಗಿತ್ತು ಅದೇ ರೀತಿ ಈ ವರ್ಷವು ಕಟ್ಟುನಿಟ್ಟಿನ ಕ್ರಮಗಳ ಮೂಲಕ ಆಚರಿಸಲು ಅನುಮತಿ ನೀಡಲಾಗುತ್ತದೆ. ಈಗಾಗಲೇ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ತೆಗೆಯಲಾಗಿದೆ. ಆರ್ಥಿಕ ಚಟುವಟಿಕೆಯಷ್ಟೇ ಕೋವಿಡ್ ನಿರ್ವಹಣೆ ಕೂಡ ಮುಖ್ಯವಾಗಿದೆ. ಹೀಗಾಗಿ ಎಲ್ಲಿ ಕೊರೋನಾ ಕಡಿಮೆಯಿರುತ್ತದೊ ಅಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕೋವಿಡ್ ಪರಿಸ್ಥಿತಿ ಬಗ್ಗೆ ವರದಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ನೀಡುವ ವರದಿಯನ್ನು ತಜ್ಞರ ತಂಡ ಪರಿಶೀಲನೆ ನಡೆಸಿದ ಬಳಿಕ ಗಣೇಶೋತ್ಸವ ಆಚರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.