‘ನಾಗಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮಿ ತಾಯಿ ವಿಜಯಾ ಸುಂದರಂ ಅವರು ಇಂದು ಮೃತಪಟ್ಟಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ವಿಜಯಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಗಾಂಧಿನಗರದ ಸಂತೃಪ್ತಿ ಹೊಟೇಲ್ನಲ್ಲಿ ವಿಜಯಲಕ್ಷ್ಮಿ ಕುಟುಂಬ ವಾಸವಾಗಿತ್ತು.
ವಿಜಯಲಕ್ಷ್ಮಿ ಅವರು ಚಿತ್ರರಂಗದಲ್ಲಿ ಆಯಕ್ಟಿವ್ ಆಗಿಲ್ಲ. ಆದರೆ, ಇತ್ತೀಚೆಗೆ ಅವರು ಸುದ್ದಿಯಲ್ಲಿದ್ದಾರೆ. ಅವರ ಸಹೋದರಿ ಉಷಾ ಅವರಿಗೆ ಅನಾರೋಗ್ಯ ಕಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ವಿಜಯಲಕ್ಷ್ಮಿಗೆ ಕೊರೋನಾ ಅಂಟಿತ್ತು. ಇದರಿಂದ ಅವರ ಆರೋಗ್ಯ ಗಂಭೀರವಾಗಿತ್ತು. ಈ ಬಗ್ಗೆ ವಿಡಿಯೋ ಮಾಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
‘ನಾನು ತುಂಬಾ ನರಳುತ್ತಿದ್ದೇನೆ. ಐದು ದಿನದಿಂದ ಜ್ವರ ಬಂದಿದೆ. ಕಷ್ಟಪಟ್ಟು ಆಸ್ಪತ್ರೆಗೆ ಬಂದಿದ್ದೇನೆ. ನಾನು ಕೋವಿಡ್ ಸೆಂಟರ್ಗೆ ಹೋಗಬೇಕು. ಈ ಬಗ್ಗೆ ಕಲಾವಿದರ ಸಂಘಕ್ಕೆ ಮನವಿ ಮಾಡಿದ್ದೇನೆ. ನಾನು ಎಲ್ಲರ ಜತೆಯೂ ಮಾತನಾಡುತ್ತಾ ಇದ್ದೇನೆ. ಆದರೆ, ಪ್ರಯೋಜನ ಆಗುತ್ತಿಲ್ಲ. ನನಗೆ ಕೋವಿಡ್ ನ್ಯುಮೋನಿಯಾ ಅಟ್ಯಾಕ್ ಆಗಿದೆ. ನಾನು ಉಳಿಯುವ ರೀತಿ ಕಾಣುತ್ತಿಲ್ಲ. ಐದು ದಿನದಿಂದ ಊಟ ಸರಿಯಾಗಿ ಸಿಗುತ್ತಿಲ್ಲ. ನಾನು ಎಲ್ಲಿಯೂ ಹೋಗಿಲ್ಲ. ಕರ್ನಾಟಕದಲ್ಲೇ ಇದ್ದೇನೆ’ ಎಂದಿದ್ದರು.ಅಲ್ಲದೇ ಅಕ್ಕ ಉಷಾ ಕೂಡ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅಕ್ಕನಿಗೆ ಸರಿಯಾಗಿ ಚಿಕಿತ್ಸೆ ಕೂಡ ಆಗುತ್ತಿಲ್ಲ ಎಂದು ನಟಿ ಸಾಕಷ್ಟು ನೊಂದಿದ್ದರು.