ರಾಮನಗರ: ಟೊಮೆಟೊ ಹೊರತುಪಡಿಸಿ ಉಳಿದೆಲ್ಲ ತರಕಾರಿಗಳು ಇನ್ನಷ್ಟು ದುಬಾರಿ ಆಗುತ್ತಿವೆ.ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಹುರುಳಿಕಾಯಿ (ಊಟಿ ಬೀನ್ಸ್) ಪ್ರತಿ ಕೆ.ಜಿ.ಗೆ ₹100ರಂತೆ ಮಾರಾಟ ನಡೆದಿದ್ದು,
ಮಳೆಯಿಂದಾಗಿ ರಾಜ್ಯದಾದ್ಯಂತ ತರಕಾರಿ ಬೆಳೆಗಳು ನೆಲ ಕಚ್ಚಿವೆ. ಹೀಗಾಗಿ, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಸರಬರಾಜು ಆಗುತ್ತಿದೆ. ಇನ್ನೂ ಕೆಲವು ದಿನ ಈ ಧಾರಣೆ ಹೀಗೆಯೇ ಮುಂದುವರಿಯಬಹುದು ಎಂದು ಎಪಿಎಂಸಿಯ ತರಕಾರಿ ವರ್ತಕರು ತಿಳಿಸಿದರು.
ಜೊತೆಗೆ ದಪ್ಪ ಮೆಣಸಿನಕಾಯಿ, ಈರೇಕಾಯಿ, ಬೆಂಡೆ, ಬದನೆ, ಕ್ಯಾರೆಟ್ ಸಹಿತ ಬಹುತೇಕ ತರಕಾರಿಗಳ ಬೆಲೆ ಅರ್ಧ ಶತಕ ದಾಟಿತ್ತು. ದುಬಾರಿ ಬೆಲೆ ಕಾರಣಕ್ಕೆ ಹಾಗಲಕಾಯಿ, ನುಗ್ಗೆಕಾಯಿ ಸೇರಿದಂತೆ ಅನೇಕ ತರಕಾರಿಗಳು ಮಾರುಕಟ್ಟೆಯಿಂದ ಕಾಣೆಯಾಗಿದ್ದವು.
ಟೊಮೆಟೊ ಇಳಿಕೆ: ಪ್ರತಿ ಕೆ.ಜಿ.ಗೆ ಶತಕದ ಗಡಿ ದಾಟಿದ್ದ ಟೊಮೆಟೊ ಬೆಲೆ ಈಗ ಇಳಿಮುಖ ಆಗುತ್ತಿದೆ. ರಾಮನಗರದ ಮಾರುಕಟ್ಟೆಯಲ್ಲಿ ಗುರುವಾರ ಟೊಮೆಟೊ ಪ್ರತಿ ಕೆ.ಜಿ.ಗೆ ₹ 60-70ರ ದರದಲ್ಲಿ ಮಾರಾಟ ನಡೆದಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಕೆ.ಜಿ.ಗೆ ₹30ರಷ್ಟು ಇಳಿಕೆ ಆಗಿದೆ. ಮಳೆ ನಿಂತ ಕಾರಣ ಕೃಷಿಕರು ಟೊಮೆಟೊ ಕೊಯ್ಲು ಹೆಚ್ಚಿಸಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ಆವಕ ಆಗುತ್ತಿದೆ. ಇದರಿಂದ ಬೆಲೆ ಇಳಿಕೆ ಹಾದಿಯಲ್ಲಿದೆ.
ಯಾವುದೆಲ್ಲ ಅಗ್ಗ: ಸದ್ಯ ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗದ ತರಕಾರಿ ಎಂದರೆ ಸೀಮೆಬದನೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 20ರಂತೆ ಮಾರಾಟ ನಡೆದಿದ್ದು, ಗ್ರಾಹಕರು ಸಮಾಧಾನದಿಂದ ಕೊಂಡೊಯ್ಯುವಂತಾಯಿತು.
ಕಳೆದ ವಾರಗಳಿಗೆ ಹೋಲಿಸಿದರೆ ಈರುಳ್ಳಿ ಬೆಲೆಯಲ್ಲೂ ಇಳಿಕೆ ಆಗಿದೆ. ಹೊಸ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗುಣಮಟ್ಟ ಅಷ್ಟಕ್ಕಷ್ಟೇ ಎಂಬಂತಿದೆ. ಹೀಗಾಗಿ ಹಳೇ ಈರುಳ್ಳಿಯೇ ತುಟ್ಟಿ ಆಗಿದೆ.