ಬೆಂಗಳೂರು: ಇನ್ನು ಎರಡು ದಿನಗಳಲ್ಲಿ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶವಾಗುವ ಸಾಧ್ಯತೆಯಿದೆ. ಜೂನ್ ಮೊದಲ ವಾರದಲ್ಲಿ ಕರ್ನಾಟಕದಲ್ಲೂ ಮಾನ್ಸೂನ್ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ವರುಣನ ಆರ್ಭಟ ಕಡಿಮೆಯಾಗಿದ್ದರೂ ಮಳೆ ಸಂಪೂರ್ಣವಾಗಿ ನಿಂತಿಲ್ಲ. ಕಳೆದ ವಾರಾಂತ್ಯದವರೆಗೆ ಬೆಂಗಳೂರು, ಮಲೆನಾಡು, ಕರಾವಳಿಯಲ್ಲಿ ಮಳೆ ಅಬ್ಬರಿಸಿತ್ತು. ಕರ್ನಾಟಕದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಆದರೂ ಇಂದು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಇಂದು ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳ ಮತ್ತು ಲಕ್ಷದ್ವೀಪದಲ್ಲಿ ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಸಿಕ್ಕಿಂ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಕಷ್ಟು ವ್ಯಾಪಕವಾದ ಗುಡುಗು ಸಹಿತ ಮಳೆಯಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕರ್ನಾಟಕದ ಕರಾವಳಿಯಲ್ಲಿ ಅಲ್ಲಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಇಂದು ಮಳೆ ಮತ್ತು ಹಿಮವನ್ನು ನಿರೀಕ್ಷಿಸಬಹುದು. ಒಡಿಶಾ, ಜಾರ್ಖಂಡ್, ಬಿಹಾರ, ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ಛತ್ತೀಸ್ಗಢ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಇಂದು ಮತ್ತು ಮುಂದಿನ 3 ದಿನಗಳ ಕಾಲ ಈಶಾನ್ಯ ಭಾರತದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ವ್ಯಾಪಕವಾದ ಮಳೆಯಾಗುತ್ತದೆ.
ಶುಕ್ರವಾರ ಮತ್ತು ಶನಿವಾರ ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗಲಿದೆ. ಮುಂದಿನ 3 ದಿನಗಳಲ್ಲಿ ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯೊಂದಿಗೆ ಮಿಂಚು ಸಹಿತ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗಲಿದೆ. ಕೇರಳದ ಪಥನಾಂತಿಟ್ಟ, ಅಲಪ್ಪುಳ, ಎರ್ನಾಕುಲಂ, ಕೊಟ್ಟಾಯಂ, ಇಡುಕ್ಕಿ, ಕೋಳಿಕೋಡ್ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ.