News Kannada
Friday, September 29 2023
ಬೆಂಗಳೂರು

ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ

No scheme will be implemented without provisions: Priyank Kharge
Photo Credit : Facebook

ಬೆಂಗಳೂರು: ಬಿಜೆಪಿ ಸರ್ಕಾರ ತನ್ನ ಒಂದು ವರ್ಷದ ಸಾಧನೆಯ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಪ್ರವೀಣ್ ಅವರ ಸಾವಿನಿಂದ ತೀವ್ರವಾಗಿ ಮನನೊಂದು ಈ ಕಾರ್ಯಕ್ರಮ ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂಬ ಕಾರಣ ಕೊಟ್ಟು ರದ್ದು ಮಾಡಲಾಗಿದೆ. ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ  ಅವರು ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು  ಸತ್ಯಾಂಶ ಏನೆಂದರೆ, ಪ್ರವೀಣ್ ಅವರ ಹತ್ಯೆಯಾಗಿದ್ದು ಜುಲೈ 23ರಂದು, ಮುಖ್ಯಮಂತ್ರಿಗಳ ಮನಸ್ಸು ಕರಗಿದ್ದು ಜುಲೈ 28 ಬೆಳಗಿನ ಜಾವ 12:30ಕ್ಕೆ. ಜನಾಕ್ರೋಶದಿಂದಾಗಿ ಜನೋತ್ಸವ ಕಾರ್ಯಕ್ರಮ ರದ್ದಾಗಿದೆ. ಅವರಿಗೆ ನಿಜವಾಗಿಯೂ ಜನರ ಬಗ್ಗೆ ಇಷ್ಟು ಕಾಳಜಿ ಇದ್ದಿದ್ದರೆ, ಅವರು ಗುಪ್ತಚರ ಇಲಾಖೆ ಮಾಹಿತಿ ಪಡೆದು 27ರಂದು ಕಾರ್ಯಕ್ರಮವನ್ನು ರದ್ದು ಮಾಡಬಹುದಿತ್ತು.

ಸಚಿವರಾದ ಸುನಿಲ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದಿಗ್ಬಂಧನ ಮಾಡಿದಾಗ ಸರ್ಕಾರಕ್ಕೆ ಈ ಜ್ಞಾನೋದಯವಾಗಿದೆ. ಬಿಜೆಪಿ ಯುವ ಮೋರ್ಚಾ ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ನೀಡಲು ಮುಂತಾದಾಗ ಜ್ಞಾನೋದಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟು ಹಿಡಿದು, ಬಿಜೆಪಿ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದಾದರೆ ಬಿಜೆಪಿ ಸರ್ಕಾರ ಇರಬೇಕೇ ಎಂದು ಜನ ಆಕ್ರೋಶದಿಂದ ಮಾತನಾಡಿದಾಗ ಅವರಿಗೆ ಜ್ಞಾನೋದಯವಾಗಿದೆ.

ಸರ್ಕಾರ ಅನುಕಂಪ ಹೆಸರಲ್ಲಿ ಯಾರ ಮೇಲೆ ಗೂಬೆಕೂರಿಸಲು ಪ್ರಯತ್ನಿಸುತ್ತಿದೆ? ಪ್ರವೀಣ್ ಅವರ ಪತ್ನಿಯೇ ಈ ಸರ್ಕಾರದಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಇನ್ನಾದರೂ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಅನುಮಾನ ವ್ಯಕ್ತವಾಗುತ್ತಿದೆ.

ಈ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೃಹ ಸಚಿವರೇ ತಮ್ಮ ಇಲಾಖೆಗೆ ಮರ್ಯಾದೆ ನೀಡದಿದ್ದಾಗ ಬೇರೆಯವರು ನೀಡಲು ಹೇಗೆ ಸಾಧ್ಯ? ಗೃಹ ಸಚಿವಾಲಯ ಅತ್ಯಂತ ಭ್ರಷ್ಟ ಇಲಾಖೆ ಎಂದು ಅವರೇ ಹೇಳಿದರು. ಪೊಲೀಸರು ಎಂಜಲು ಕಾಸು ತಿಂದು ನಾಯಿತರ ಬಿದ್ದಿರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಬೆಂಗಳೂರು ಕಮಿಷನರ್ ಸುಳ್ಳು ಹೇಳುತ್ತಾರೆಂದು ಶಾಸಕರು ಟೀಕೆ ಮಾಡಿದಾಗ ಗೃಹಸಚಿವರು ಸುಮ್ಮನೆ ಇದ್ದರು. ಸರ್ಕಾರದ ದುರಾಡಳಿತ ಬಗ್ಗೆ ಟೀಕೆ ಮಾಡಿದರೆ ಕಾಂಗ್ರೆಸ್ ನವರೇ ರೇಪ್ ಮಾಡುತ್ತಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ.

ಇದೇ ಕಾರಣಕ್ಕೆ ಬಿಜೆಪಿಯ ಶಾಸಕರಾದ ಯತ್ನಾಳ್ ಅವರು ‘ಕರ್ನಾಟಕಕ್ಕೆ ಬಲಿಷ್ಠವಾದ ಗೃಹ ಸಚಿವರು ಬೇಕು’ ಎಂದು ಹೇಳಿದ್ದಾರೆ.

ಆಳಂದದಲ್ಲಿ ಕೋಮುಗಲಭೆ ಆಗುವ ಸಾಧ್ಯತೆ ಇತ್ತು. ಇದೇ ಮುಖ್ಯಮಂತ್ರಿ, ಗೃಹ ಸಚಿವರು ಸೆಕ್ಷನ್ 144 ಜಾರಿ ಮಾಡಿದ್ದರು. ಆದರೆ ಇದೇ ಬಿಜೆಪಿಯ ಸಂಸದರಾದ ಉಮೇಶ್ ಜಾಧವ್ ಅವರು ಸೆಕ್ಷನ್ 144 ಉಲ್ಲಂಘನೆ ಮಾಡಿದ್ದರು. ಇವರಿಗೆ ಸೆಕ್ಷನ್ 144 ಉಲ್ಲಂಘನೆ ಮಾಡಲು ಅವಕಾಶ ಕೊಟ್ಟವರು ಯಾರು? ನಿಮ್ಮ ಆದೇಶಕ್ಕೆ ನಿಮ್ಮದೇ ನಾಯಕರು ಕಿಮ್ಮತ್ತು ನೀಡುತ್ತಿಲ್ಲ.

ಶಿವಮೊಗ್ಗ ಬಿಜೆಪಿಯ ಕೇಂದ್ರ ಸ್ಥಾನವಾದರೂ ಹರ್ಷ ಕೊಲೆ ಪ್ರಕರಣದಲ್ಲಿ ಸರ್ಕಾರ ಸೆಕ್ಷನ್ 144 ಜಾರಿ ಮಾಡಿತ್ತು. ಅದನ್ನು ಉಲ್ಲಂಘನೆ ಮಾಡಿದ್ದು ಸಚಿವರಾಗಿದ್ದ ಈಶ್ವರಪ್ಪ ಹಾಗೂ ಸಂಸದರಾಗಿದ್ದ ರಾಘವೇಂದ್ರ ಅವರು.

ಅವರದೇ ಪಕ್ಷದ ನಾಯಕರು ಅವರೇ ಪಕ್ಷದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದರೆ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಎಷ್ಟು ಬೆಲೆ ನೀಡುತ್ತಿದ್ದಾರೆ ಎಂದು ತಿಳಿಯುತ್ತದೆ.

ಈಗಲೂ ಕೂಡ ದಕ್ಷಿಣ ಕನ್ನಡದಲ್ಲಿ ಸೆಕ್ಷನ್ 144 ಜಾರಿಯಾಗಿದ್ದು, ಈಗ ಪ್ರವೀಣ್ ಅವರಿಗೆ ನ್ಯಾಯ ಕೊಡಿಸಲು ಯಾಕೆ ಬಿಜೆಪಿ ನಾಯಕರು ಹೋಗುತ್ತಿಲ್ಲ? ಹರ್ಷ ಅವರಿಗೆ ನ್ಯಾಯ ಕೊಡಿಸಲು ಇರುವ ಕಾಳಜಿ ಪ್ರವೀಣ್ ಅವರಿಗೆ ನ್ಯಾಯ ಕೊಡಿಸಲು ಯಾಕೆ ಇಲ್ಲ. ಅಲ್ಲಿ ಒಂದು ನ್ಯಾಯ, ಇಲ್ಲಿ ಒಂದು ನ್ಯಾಯ ಯಾಕೆ?

ನಿಮ್ಮ ಅಸ್ತ್ರ ನಿಮಗೆ ತಿರುಗುಬಾಣವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ತಮ್ಮ ಚಾಳಿ ಮುಂದುವರಿಸಿ, ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಕೇವಲ ಹೆಸರಿಗಷ್ಟೇ ತೇಜಸ್ವಿ. ಅವರು ಅವಿವೇಕದ ಪರಮಾವಧಿ. ಅವರು ನಿನ್ನೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಹಿಂದೂ ಕಾರ್ಯಕರ್ತರ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ ಇದು ನಿಲ್ಲುವುದು ಯಾವಾಗ? ಎಂದು ಪ್ರಶ್ನೆ ಕೇಳಿದ್ದಾರೆ.

ಎಂಟು ವರ್ಷ ಕೇಂದ್ರದಲ್ಲಿ ಮೋದಿ ಆಡಳಿತ ಹಾಗೂ ರಾಜ್ಯದಲ್ಲಿ ಮೂರು ವರ್ಷ ನಿಮ್ಮದೇ ಆಡಳಿತ ನಡೆದಿದೆ ಆದರೂ ಕೂಡ ನೀವೇ ಹಿಂದುಗಳ ಹತ್ಯೆ ಕಡಿಮೆಯಾಗಿಲ್ಲ ಎಂದು ಹೇಳುತ್ತಿದ್ದೀರಿ. ಆಮೂಲಕ ನಿಮ್ಮ ಮುಖ್ಯಮಂತ್ರಿಗಳು, ಗೃಹ ಸಚಿವರು ಅಸಮರ್ಥರು ಎಂದು ನೀವೇ ಹೇಳುತ್ತಿದ್ದೀರಿ. ಇದು ನಿಲ್ಲುವುದು ಯಾವಾಗ? ಈ ಪ್ರಶ್ನೆಯನ್ನು ನಿಮ್ಮ ಕಾರ್ಯಕರ್ತರೇ ಕೇಳುತ್ತಿದ್ದು ಅದಕ್ಕೆ ಉತ್ತರಿಸಿ.

See also  ಅನೇಕ ವರ್ಷಗಳಾದರೂ ಉದ್ಯಮ ಸ್ಥಾಪಿಸದ ಸಂಸ್ಥೆಗಳ ಭೂಮಿ ಮಂಜೂರಾತಿ ರದ್ದು : ಬಸವರಾಜ ಬೊಮ್ಮಾಯಿ

ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ ಎಂದು ತೇಜಸ್ವಿ ಅವರು ಅಮಾನವೀಯ ಹೇಳಿಕೆ ನೀಡಿದ್ದೀರಿ. ನಿಜ, ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ ಆದರೆ ಜನಸಾಮಾನ್ಯರಲ್ಲಿ ಖಾಕಿ ನೋಡಿದರೆ ಎರಡು ರೀತಿಯ ಭಾವನೆ ಬರುತ್ತದೆ. ತಪ್ಪು ಮಾಡಿದವರಿಗೆ ಖಾಕಿ ಕಂಡರೆ ಗೌರವ ಇರುತ್ತದೆ. ಆದರೆ ತಪ್ಪು ಮಾಡಿದವರಿಗೆ ಭಯ ಇರುತ್ತದೆ. ಆದರೆ ನಿಮ್ಮ ಸರ್ಕಾರದಲ್ಲಿ ಖಾಕಿಗೆ ನೀವೇ ಗೌರವ ನೀಡುತ್ತಿಲ್ಲ. ನೀವೇ ಕಳ್ಳರನ್ನು ಸಾಕುತ್ತಿದ್ದೀರಿ.

40 ಪರ್ಸೆಂಟ್ ಕಮಿಷನ್ ಸರ್ಕಾರದಲ್ಲಿ ಪೊಲೀಸ್ ಎಂದರೆ ಯಾರಿಗೂ ಭಯವಿಲ್ಲ. ವರ್ಗಾವಣೆ ದಂದೆ ಮೂಲಕ ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಿಸುತ್ತಿದ್ದಾರೆ. ಅಧಿಕಾರಿ ಹಣಕೊಟ್ಟು ಹುದ್ದೆಗೆ ಬಂದಾಗ ತಾನು ಹಾಕಿದ ಹಣವನ್ನು ಹಿಂಪಡೆಯುವ ಬಗ್ಗೆ ಗಮನಹರಿಸುತ್ತಾರೆ ಹೊರತು ಕಾನೂನು ವ್ಯವಸ್ಥೆ ಕಾಪಾಡಿ ಸಮಾಜದಲ್ಲಿ ಶಾಂತಿ ನೆಲೆಸಲು ಅಲ್ಲ. ಇಂತಹ ಸಂದರ್ಭದಲ್ಲಿ ಖಾಕಿಗೆ ಯಾರು ಗೌರವ ನೀಡುತ್ತಾರೆ. ಹೊಸದಾಗಿ ಬರುವ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕರಾಗಿರುತ್ತಾರೆ ಎಂದರೆ ಅದರಲ್ಲೂ ಅಕ್ರಮ ಮಾಡಿ ಭ್ರಷ್ಟರನ್ನು ನೇಮಕ ಮಾಡಿಕೊಳ್ಳುತ್ತಿದ್ದೀರಿ.

ಇಂತಹ ಪರಿಸ್ಥಿತಿಯಲ್ಲಿ ಎಲ್ಲರಿಗೂ ರಕ್ಷಣೆ ನೀಡಲು ಹೇಗೆ ಸಾಧ್ಯ? ನಿಮ್ಮ ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿದೆಯೇ? ನಿಮ್ಮ ಕಾರ್ಯಕರ್ತರ ಬಗ್ಗೆ ನೀವೇ ಹೀಗೆ ಮಾತನಾಡುತ್ತಿರುವುದರಿಂದ ನಿಮ್ಮ ಕಾರ್ಯಕರ್ತರು ಈ ರೀತಿ ರೊಚ್ಚಿಗೆದ್ದಿದ್ದಾರೆ.

ತೇಜಸ್ವಿ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ಮತಾಂಧರ 1500 ಪ್ರಕರಣಗಳನ್ನು ಹಿಂಪಡೆದಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಈಗ ನಾನು ಅವರಿಗೆ ಒಂದು ಸವಾಲು ಹಾಕುತ್ತೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಕೋಮು ಗಲಭೆಯಲ್ಲಿ ಬಂಧಿತರಾದ ಯಾವುದೇ ಪ್ರಕರಣ ಹಿಂಪಡೆಯಲಾಗಿಲ್ಲ. ನಮ್ಮ ಸರ್ಕಾರ ಪ್ರಕರಣ ಹಿಂಪಡೆದಿದ್ದು, ಕೇವಲ ಪ್ರಗತಿಪರು, ಹೋರಾಟ ಮಾಡಿದ ರೈತರ ಮೇಲೆ ಹಾಕಿದ ಪ್ರಕರಣಗಳನ್ನು ಮಾತ್ರ. ಒಂದು ವೇಳೆ ನಮ್ಮ ಸರ್ಕಾರ ಕೊಲೆಗಡುಕರು ಪ್ರಕರಣ ಹಿಂಪಡೆದಿದ್ದರೆ, ಕಳೆದ 3 ವರ್ಷಗಳಿಂದ ನಿಮ್ಮ ಸರ್ಕಾರ ಇದ್ದರೂ ಮತ್ತೆ ಏಕೆ ಆ ಪ್ರಕರಣಗಳನ್ನು ಮರು ದಾಖಲಿಸಿಲ್ಲ?

ನಾಲ್ಕು ವರ್ಷದಿಂದ ಪರೇಶ್ ಮೆಸ್ತಾ ಅವರ ಪ್ರಕರಣ ಸಿಬಿಐ ನಲ್ಲಿದೆ. ನಿಮ್ಮ 25 ಸಂಸದರ ಪೈಕಿ ಯಾರಾದರೂ ಒಬ್ಬರು ಈ ಪ್ರಕರಣ ಏನಾಯ್ತು ಎಂದು ಕಾಳಜಿ ವಹಿಸಿದ್ದಾರಾ?

ಎಸ್ ಡಿ ಪಿ ಐ ಸಂಘಟನೆ ನಿಷೇಧಿಸಬೇಕು ಎಂದು ಹೇಳುತ್ತಾರಲ್ಲ ಯಾಕೆ ಮಾಡುತ್ತಿಲ್ಲ? ತೇಜಸ್ವಿ ಅವರು ಕಳೆದ ವರ್ಷ ಲೋಕಸಭೆಯಲ್ಲಿ ‘ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಸಂಬಂಧ ಕೇಂದ್ರ ಸರ್ಕಾರ ಎಸ್ ಡಿ ಪಿ ಐ, ಪಿ ಎಫ್ ಐ ಹಾಗೂ ಇತರೆ ಸಂಘಟನೆಗಳನ್ನು ನಿಷೇಧಿಸುವ ಕುರಿತು ಗಂಭೀರವಾಗಿ ಪರಿಗಣಿಸಿದೆಯೇ ಇಲ್ಲವೇ ‘ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೋದಿ ಅವರ ಸರ್ಕಾರ ಕೊಟ್ಟಿರುವ ಉತ್ತರ, ‘ ಈ ಸಂಘಟನೆಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಿದ್ದರೆ ಅವುಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಸರ್ಕಾರದಿಂದ ಈ ಸಂಘಟನೆಗಳ ನಿಷೇಧಕ್ಕೆ ಯಾವುದೇ ರೀತಿಯ ಪ್ರಸ್ತಾವನೆ ಬಂದಿಲ್ಲ’ ಎಂದು ಬಂದಿತ್ತು.

ಇನ್ನು ಬಿಜೆಪಿಯವರ ಪ್ರಣಾಳಿಕೆಯಲ್ಲಿ ಏನಿದೆ ಎಂದು ಅವರಿಗೆ ಗೊತ್ತಿಲ್ಲ. ಅದರಲ್ಲಿ ದಕ್ಷ ಆಡಳಿತ ಹಾಗೂ ಸುರಕ್ಷಿತ ಕರ್ನಾಟಕ ಎಂಬ ವಿಚಾರ ಪ್ರಸ್ತಾಪವಾಗಿದೆ. ಅದರಲ್ಲಿ ಪಿ ಎಫ್ ಐ, ಕೆ ಎಫ್ ಟಿ ಯಂತಹ ಕೋಮುವಾದದ ಸಂಘಟನೆಗಳನ್ನು ನಿಷೇಧಿಸುವುದಾಗಿ ತಿಳಿಸಿದ್ದಾರೆ. ಕಳೆದ ಮೂರು ವರ್ಷದಿಂದ ಅವರ ಸರ್ಕಾರ ಇದ್ದರೂ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಯಾಕೆ ಕಳಿಸಿಲ್ಲ?

ಎಸ್‌ಡಿಪಿಐ ಹಾಗೂ ಪಿ ಎಫ್ ಐ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ ಆರ್ ಎಸ್ ಎಸ್ ಮೂಲದ ಸತ್ಯಜಿತ್ ಎಂಬುವರು ಸಂದರ್ಶನ ಒಂದರಲ್ಲಿ ಒಂದು ಅಂಶ ಹೇಳಿದ್ದಾರೆ. ಅವರ ಪ್ರಕಾರ, ‘ರಾಜಕೀಯವಾಗಿ ಕಾಂಗ್ರೆಸ್ಸನ್ನು ಸೋಲಿಸಬೇಕಾದರೆ ಎಸ್ ಡಿ ಪಿ ಐ ಬಲವಾಗಬೇಕು. ಹೀಗಾಗಿ ಬಿಜೆಪಿಯವರು ಎಸ್ ಡಿ ಪಿ ಐಗೆ ಆರ್ಥಿಕ ನೆರವು ನೀಡಿ ಬೆಂಬಲ ನೀಡುತ್ತಿದೆ. ಮುಸಲ್ಮಾನರನ್ನು ಕಾಂಗ್ರೆಸ್ ನಿಂದ ಬೇರ್ಪಡಿಸಲು ಎಸ್ ಡಿ ಪಿ ಐ ಅನ್ನು ಬಿಜೆಪಿ ಬೆಳೆಸುತ್ತಿದೆ. ಇಲ್ಲದಿದ್ದರೆ ಇಷ್ಟು ವರ್ಷಗಳ ಕಾಲ ಇಲ್ಲದ ಹಿಜಾಬ್ ವಿಚಾರ ಈಗ ಏಕೆ ಬರುತ್ತಿತ್ತು ಎಂದು ಹೇಳಿದ್ದಾರೆ.

ಬಿಜೆಪಿಯವರು ತಮ್ಮ ಕಾರ್ಯಕರ್ತರ ಬಗ್ಗೆ ಯಾವ ರೀತಿ ಕಾಳಜಿ ಇದೆ ಎಂದು ಹರ್ಷ ಅವರ ಸಹೋದರಿ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕಾರ್ಯಕರ್ತರನ್ನು ಬಳಸಿ ಬಿಸಾಡುವ ಪದ್ಧತಿ ಬಿಜೆಪಿಯಲ್ಲಿದೆ. ಹರ್ಷ ಹಂತಕರಿಗೆ ಜೈಲಿನಲ್ಲಿ ರಾಜಾಥಿತ್ಯ ನೀಡಲಾಗಿದೆ. ಹರ್ಷ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಿಲ್ಲ. ಬದಲಿಗೆ ಕೋವಿಡ್ ನಿಂದ ಮೃತಪಟ್ಟವರಿಗೆ ನೀಡಬೇಕಿದ್ದ ನಿಧಿಯಿಂದ ನೀಡಲಾಗಿದೆ.

ತೇಜಸ್ವಿ ಸೂರ್ಯ ಅವರು ಇಂದು ದೂರವಾಣಿ ಸಂಭಾಷಣೆಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಬೀದಿಗಿಳಿದು ಕಲ್ಲು ಹೊಡೆಸಬಹುದಿತ್ತು ಎಂದು ಹೇಳಿದ್ದಾರೆ. ಸಂಸದರಾಗಿ ಇಂತಹ ಹೇಳಿಕೆ ನೀಡಲು ಸಾಧ್ಯವೇ. ರಾಜ್ಯದಲ್ಲೂ ಉತ್ತರ ಪ್ರದೇಶ ಆಡಳಿತ ಮಾದರಿ ಎಂದು ಹೇಳುತ್ತೀರಿ. ಸಾರ್ವಜನಿಕ ಆಸ್ತಿ ನಾಶ ಮಾಡಿದರೆ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನಿಮ್ಮ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಬಹುದೇ? ದೆಹಲಿಯಲ್ಲಿ ನಿಮ್ಮ ಮೇಲೆ ಸಾರ್ವಜನಿಕ ಆಸ್ತಿ ನಾಶದ ಪ್ರಕರಣ ದಾಖಲಾಗಿದ್ದು ಬೊಮ್ಮಾಯಿ ಅವರಿಗೆ ಹೇಳಿ ನೀವೇ ನಿಮ್ಮ ಮನೆ ಮೇಲೆ ಬುಲ್ಡೋಜರ್ ಹತ್ತಿಸುತ್ತಿರೋ ಅಥವಾ ನಾವು ಬರಬೇಕೋ?

See also  ಇಂದಿನಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ 4 ದಿನ ಮಳೆ ಸಾಧ್ಯತೆ

ನೀವು ನಿಮ್ಮ ಮರ್ಯಾದೆ ಬಗ್ಗೆ ಕಾಳಜಿ ಇಲ್ಲದಿದ್ದರೆ ಕನಿಷ್ಠ ನೀವು ಬೆಂಗಳೂರಿನ ಮರ್ಯಾದೆಯನ್ನಾದರೂ ಉಳಿಸಿ. ಅದನ್ನು ಯಾಕೆ ಕಳೆಯುತ್ತಿದ್ದಿರಿ?

ಬಿಜೆಪಿ ಸರ್ಕಾರ ಈಗ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಲು ಚಿಂತನೆ ನಡೆಸುತ್ತಿದೆ. ಆ ಮೂಲಕ ಗೃಹ ಸಚಿವಾಲಯ ಈ ತನಿಖೆ ನಡೆಸುವ ಸಾಮರ್ಥ್ಯ ಹೊಂದಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದೆ. ಪ್ರಸಕ್ತ ಗೃಹ ಇಲಾಖೆಯ ಬಗ್ಗೆ ಯಾವುದೇ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಮುಖ್ಯಮಂತ್ರಿಗಳು ಪ್ರವೀಣ್ ಅವರ ಪ್ರಕರಣದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಅವಧಿಯಲ್ಲಿ 22 ಇಂದು ಕಾರ್ಯಕರ್ತರ ಹತ್ಯೆಯಾಗಿತ್ತು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳೇ ನೀವು ಕೂಡ ಬಿಜೆಪಿಯ ಐಟಿ ಸೆಲ್ ನಿಂದ ಸುಳ್ಳು ಮಾಹಿತಿ ಪಡೆಯುತ್ತೀರಿ ಎಂದು ನಾವು ಭಾವಿಸಿರಲಿಲ್ಲ.

ನಿಮಗೆ ಮಾಹಿತಿ ಇಲ್ಲದಿದ್ದರೆ, ಕನಿಷ್ಟಪಕ್ಷ ನಿಮ್ಮ ಇಲಾಖೆಯಿಂದ ಮಾಹಿತಿ ತರೆಸಿಕೊಳ್ಳಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಬಿಜೆಪಿ ನಾಯಕರು ಹಿಂದೂ ನಾಯಕರ ಹತ್ಯೆಯಾಗಿದೆ ಎಂದು ಕೇಂದ್ರಕ್ಕೆ ಪಟ್ಟಿ ನೀಡಿದ್ದರು. ಅದರಲ್ಲಿ ಅಶೋಕ್ ಪೂಜಾರಿ ಎಂಬ ಹೆಸರು ಇತ್ತು. ಆದರೆ ಆ ಅಶೋಕ್ ಪೂಜಾರಿ ಅವರು ಸತ್ತಿರಲಿಲ್ಲ ಆದರೂ ಅವರ ಹೆಸರು ಸೇರಿಸಲಾಗಿತ್ತು. ಈ ಪೈಕಿ 12 ಪ್ರಕರಣಗಳು ಪಿಎಫ್‌ಐ ಹಾಗೂ ಎಸ್ ಡಿ ಪಿಐ ಗೆ ಸಂಬಂಧಪಟ್ಟ ಕೋಮು ಸಂಘರ್ಷದ ಹತ್ಯೆಯಾದರೆ. ಉಳಿದ ಪ್ರಕರಣಗಳು ವೈಯಕ್ತಿಕ ಕಾರಣಗಳ ಹತ್ಯೆ ಪ್ರಕರಣಗಳಾಗಿದ್ದವು. ಇವುಗಳ ಪೈಕಿ ಯಾವ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ ಹೇಳಿ?

ನಿಮ್ಮ ಸರ್ಕಾರ ಕೂಡ ಡಿಜಿ ಹಾಗೂ ಐಜಿಪಿ ಅವರ ಅಭಿಪ್ರಾಯ ತಿರಸ್ಕರಿಸಿ ವಿವಿಧ ಸಂಘಟನೆಗಳ ಹಲವು ಪ್ರಕರಣಗಳನ್ನು ಹಿಂಪಡೆದಿದೆ. ಪೊಲೀಸ್ ಅಧಿಕಾರಿಗಳು ಸಲ್ಲಿಸಿರುವ ಅಭಿಪ್ರಾಯದಲ್ಲಿ ‘ಒಟ್ಟು 70 ಪ್ರಕರಣಗಳಲ್ಲಿ 65 ಪ್ರಕರಣಗಳು ಪ್ರಸ್ತುತ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಐದು ಪ್ರಕರಣಗಳು ತನಿಖೆ ಹಂತದಲ್ಲಿದೆ. ಈ ಹಂತದಲ್ಲಿ ಪ್ರಕರಣಗಳನ್ನು ಹಿಂಪಡೆದರೆ ಕಾನೂನು ಪರಿಪಾಲನೆ, ಸಾರ್ವಜನಿಕ ಹಿತಾಸತಿಗೆ ಧಕ್ಕೆ ಉಂಟಾಗುತ್ತದೆ. ಪೊಲೀಸರ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗುತ್ತದೆ ಹಾಗೂ ಕಾರ್ಯನಿರ್ವಹಣೆ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ. ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದರಿಂದ ಮುಂದೆಯೂ ಸಹ ಇದೇ ರೀತಿಯ ಘಟನೆಗಳು ಮರುಕಳಿಸಿ ನ್ಯಾಯ ಪ್ರಕ್ರಿಯೆ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುತ್ತದೆ. ಮುಂದೆಯೂ ಆರೋಪಿಗಳು ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಸಂಭವವಿರುತ್ತದೆ. ಹೀಗಾಗಿ ಪ್ರಕರಣಗಳನ್ನು ಹಿಂಪಡೆಯಬಾರದು’ ಎಂದು ಸರ್ಕಾರಕ್ಕೆ ತಿಳಿಸಿದ್ದರು.

ಬೊಮ್ಮಾಯಿ ಸಾಹೇಬ್ರೆ, ಪೊಲೀಸ್ ಅಧಿಕಾರಿಗಳ ಅಭಿಪ್ರಾಯವನ್ನು ತಿರಸ್ಕರಿಸಿ ಪ್ರಕರಣ ಪಡೆಯದಿರುವುದು ಸ್ವತಃ ತಾವುಗಳು.

ನಿಮ್ಮ ವೈಫಲ್ಯಗಳನ್ನು ನಾವು ಎತ್ತಿ ಹಿಡಿದರೆ, ನನಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಡ ಎಂದು ಹೇಳುತ್ತೀರಿ. ನಿನ್ನೆ ನಿಮ್ಮ ಕಾರ್ಯಕರ್ತರೇ ನಿಮ್ಮ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದ್ದಾರೆ. ನಿಮ್ಮ ಕಾರ್ಯಕರ್ತರು ಕೇವಲ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಮಾತ್ರ ಅಲ್ಲಾಡಿಸಿಲ್ಲ. ನಿಮ್ಮ ಸರ್ಕಾರವನ್ನು ಅಲ್ಲಾಡಿಸಿದ್ದಾರೆ. ಇದೇ ಕಾರಣಕ್ಕೆ ಮಧ್ಯರಾತ್ರಿ ತುರ್ತುಪತ್ರಿಕಾಗೋಷ್ಠಿಯನ್ನು ಮಾಡಿ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಈ ಜನಾಕ್ರೋಶಕ್ಕೆ ನಿಮ್ಮ ಉತ್ತರ ಏನು. ನಿಮ್ಮದು ಅಸಮರ್ಥ ಸರ್ಕಾರವಾಗಿದೆ.

ನಿಮ್ಮ ಸಾಧನೆ ಏನೆಂದರೆ, ಕಾನೂನು ಸುವ್ಯವಸ್ಥೆ ಹಾಳಾಗಿರುವುದು, ಭೋವಿ ಅಭಿವೃದ್ಧಿ ನಿಗಮದಲ್ಲಿ 150 ಕೋಟಿ ಅಕ್ರಮ, ಗಂಗಾ ಕಲ್ಯಾಣ ಯೋಜನೆಯಲ್ಲಿ 451 ಕೋಟಿ ಪರಿಶಿಷ್ಟರ ಹಣ ನುಂಗುವುದು, ಪಿಎಸ್ಐ ಹಗರಣ, ಪಿ ಡಬ್ಲ್ಯೂಡಿ ಜೆ ಇ ಇ, ಆರ್ಟಿಕಲ್ಚರ್ ಇಲಾಖೆ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಅಕ್ರಮ ನಡೆದಿರುವುದು. ಒಂದೇ ದಿನ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಬಂಧನವಾಗಿದ್ದು ನಿಮ್ಮ ಸರ್ಕಾರದ ಸಾಧನೆ.

ರಾಜ್ಯದಲ್ಲಿ ಈ ಭ್ರಷ್ಟೋತ್ಸವ ನಿಲ್ಲಬೇಕಾದರೆ ನೀವು ರಾಜೀನಾಮೆ ನೀಡಬೇಕು. ಗೃಹ ಸಚಿವರು ಇಷ್ಟೆಲ್ಲಾ ಆದ ನಂತರ ರಾಜಕೀಯದಿಂದಲೇ ಸ್ವಯಂ ನಿವೃತ್ತಿರಿ ಪಡೆಯುವುದು ಉತ್ತಮ.

ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ರಾಜೀನಾಮೆ ನೀಡಿ. ನೀವು ನಾಯಕತ್ವ ಬದಲಾಯಿಸಲು ಇಚ್ಛೆ ಇಲ್ಲ ಎಂದರೆ ಚುನಾವಣೆ ಎದುರಿಸೋಣ ಬನ್ನಿ. ನಾವು ಸಿದ್ಧರಿದ್ದೇವೆ. ಬಿಜೆಪಿ ಕಾರ್ಯಕರ್ತರೇ ನಿಮ್ಮ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ರಾಜೀನಾಮೆ ನೀಡುವುದು ಉತ್ತಮ.’

ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಮೂರು ಆಗ್ರಹ: 

1. ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಮುಕ್ತ ಹಾಗೂ ಪಾರದರ್ಶಕವಾಗಬೇಕು.

2.ಇದುವರೆಗೂ ಆಗಿರುವ ಕೋಮುಗಲಭೆ ಹಾಗೂ ಕೋಮುಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು.

3.ನಮ್ಮ ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಎಲ್ಲಾ ಸಮುದಾಯಗಳ ಸಂಘಟನೆಗಳನ್ನು ನಿಷೇಧಿಸಬೇಕು. ಇದಕ್ಕೆ ನಾವು ಬೆಂಬಲಿಸುತ್ತೇವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು