News Kannada
Sunday, November 27 2022

ಬೆಂಗಳೂರು

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯ ನ್ಯಾಯಾಂಗ ತನಿಖೆ ಮಾಡಬೇಕು - 1 min read

I respect all communities equally, says Siddaramaiah
Photo Credit : Facebook

ಬೆಂಗಳೂರು: “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ.

“ಆಪರೇಷನ್ ಕಮಲ’ದ ಮುಂದುವರಿದ ಭಾಗವಾದ “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧ ಪ್ರಕರಣ. ಈ ಬಗ್ಗೆ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿಯೇ ನ್ಯಾಯಾಂಗ ತನಿಖೆ ಮಾಡಬೇಕು.

ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಸಿದರೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮಾತ್ರವಲ್ಲ ಚುನಾವಣಾ ಆಯೋಗ ಕೂಡಾ ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಗುಮಾನಿಗಳಿವೆ. ಕೇಂದ್ರ ಚುನಾವಣಾ ಆಯೋಗ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು.

ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆಯ ಹಗರಣ ನಡೆಸಿದ ಸಂಸ್ಥೆಯ ಹೆಸರು ರಾಜ್ಯದ ಸಚಿವರೊಬ್ಬರ ಒಡೆತನದ ಸಂಸ್ಥೆಯ ಹೆಸರಿನ ಜೊತೆ ತಾಳೆಯಾಗುವುದು ಕಾಕತಾಳಿಯವಾಗಿರಲಾರದು. ಅದೇ ರೀತಿ ಸಂಸ್ಥೆಯ ಕಚೇರಿ ಇರುವ ಸ್ಥಳದ ಸಮೀಪದಲ್ಲಿಯೇ ಈ ಸಂಶಯಿತ ಸಚಿವರ ಸಂಸ್ಥೆಗಳೂ ಇರುವುದು ಸಂಶಯವನ್ನು ಇನ್ನಷ್ಟು ಬಲಪಡಿಸುತ್ತದೆ. ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗದೆ ಇಂತಹದ್ದೊಂದು ಹಗರಣ ನಡೆಸಲು ಸಾಧ್ಯವಿಲ್ಲ, ಅಧಿಕಾರಿಗಳು ಸ್ವಯೀಚ್ಚೆಯಿಂದ ಇಷ್ಟೊಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರಿಂದ ಹಿಡಿದು ಹಿರಿಯ ಸಚಿವರೆಲ್ಲರೂ ಭಾಗಿಯಾಗಿಯೇ ಈ ಕೆಲಸ ಮಾಡಿದ್ದಾರೆ.

‘ಮೇಲಿನವರ’ ರಕ್ಷಣೆ ಇಲ್ಲದೆ ಮಹಾನಗರ ಪಾಲಿಕೆ ಯಾವುದೇ ಪೂರ್ವಪರ ಪರಿಶೀಲನೆ ನಡೆಸದೆ “ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡಲು ಅನುಮತಿ ನೀಡಲು ಹೇಗೆ ಸಾಧ್ಯ?

ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಮಾಹಿತಿ ಸಂಗ್ರಹದ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕಾಗಿದ್ದು ಖಾಸಗಿ ಸಂಸ್ಥೆಗೆ ಇದನ್ನು ಒಪ್ಪಿಸುವುದೇ ಅಪರಾಧವಾಗಿದೆ. ಬಿಬಿಎಂಪಿಯ ಅಧಿಕಾರಿಗಳೇ ಎಂದು ತಪ್ಪಾಗಿ ತಿಳಿದು ಮತದಾರರು ವೈಯಕ್ತಿಕ ಮಾಹಿತಿಯನ್ನು ನೀಡಿದ್ದಾರೆ. ಇದು ವಿಶ್ವಾಸ ದ್ರೋಹವಾಗಿದೆ.

ಚಿಲುಮೆ ಸಂಸ್ಥೆಯ ಮಾಲೀಕ ಕೃಷ್ಣಪ್ಪ ರವಿಕುಮಾರ ಎಂಬವರು ಈ ಹಗರಣದ ರೂವಾರಿಯಾಗಿ ಮೇಲ್ನೋಟಕ್ಕೆ ಕಾಣಿಸಿದರೂ ಇದರ ಹಿಂದೆ ಸರ್ಕಾರದ ಉನ್ನತ ಸ್ಥಾನದಲ್ಲಿರುವವರ ಕೈವಾಡ ಖಂಡಿತ ಇದೆ. ಈ ಬಗ್ಗೆ ತನಿಖೆ ಮಾಡಿದರೆ ಮಾತ್ರ ಸತ್ಯ ಬಯಲಾಗಲು ಸಾಧ್ಯ.

ಯಾವುದೋ ಒಂದು ಸಂಸ್ಥೆ ಅರ್ಜಿ ನೀಡಿ ತಾವು ಮತದಾರರನ್ನು ಜಾಗೃತಗೊಳಿಸುವ ಮತ್ತು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯವನ್ನು ಉಚಿತವಾಗಿ ಮಾಡುವುದಾಗಿ ತಿಳಿಸಿದಾಗಲೇ ಸಂಸ್ಥೆಯ ಉದ್ದೇಶದ ಬಗ್ಗೆ ಸಂಶಯ ಮೂಡಬೇಕಿತ್ತು. ಹೀಗಿದ್ದರೂ 20 ಆಗಸ್ಟ್ 2022ರಂದು ಬಿಬಿಎಂಪಿ ಆಯುಕ್ತರು ಅನುಮತಿ ನೀಡಿದ್ದಾರೆ.

ಜಾಹಿರಾತು ನೀಡದೆ. ಟೆಂಡರ್ ಕರೆಯದೆ ಬಿಬಿಎಂಪಿ ಒಂದು ಖಾಸಗಿ ಕಂಪನಿಗೆ ಈ ಕಾರ್ಯವನ್ನು ಈ ಕೆಲಸವನ್ನು ನೀಡಲು ಹೇಗೆ ಸಾಧ್ಯ? ಅನುಮತಿ ನೀಡುವಾಗ ಸಂಸ್ಥೆಯ ಹಿನ್ನೆಲೆಯನ್ನು ಯಾಕೆ ಪರಿಶೀಲಿಸಿಲ್ಲ? ಉಚಿತ ಸೇವೆ ನೀಡುವ ಉದ್ದೇಶದ ಹಿನ್ನೆಲೆಯನ್ನು ಯಾಕೆ ತಿಳಿದುಕೊಂಡಿಲ್ಲ?

See also  ಸರ್ಕಾರ, ಅಭಿಮಾನಿಗಳ ಸಹಕಾರಕ್ಕೆ ಧನ್ಯವಾದ ತಿಳಿಸಿದ ರಾಘವೇಂದ್ರ ರಾಜಕುಮಾರ್

ಚಿಲುಮೆ ಕಂಪನಿಯವರು ಬಿಬಿಎಂಪಿ ಮೂಲಕ ತಮ್ಮ ನೌಕರರಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದ್ದೇ ಅಕ್ರಮವಾಗಿದೆ. ಕಾನೂನಿನ ಪ್ರಕಾರ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿವೃತ್ತ ಸರ್ಕಾರಿ ನೌಕರರಲ್ಲದವರು ಬೂತ್ ಲೆವೆಲ್ ಆಫೀಸರ್ ಆಗಲು ಅವಕಾಶ ಇಲ್ಲ.

ಈ ಹಗರಣ ಬಯಲಾಗಿರುವುದು ಗೊತ್ತಾದ ಕೂಡಲೇ ಬಿಬಿಎಂಪಿ ನಿಬಂಧನೆಗಳನ್ನು ಉಲ್ಲಂಘನೆಯ ಕಾರಣ ನೀಡಿ 16-11-2022ರಂದು ಮತಪಟ್ಟಿ ಪರಿಷ್ಕರಣೆಗಾಗಿ ಖಾಸಗಿ ಸಂಸ್ಥೆಗೆ ನೀಡಿರುವ ಗುತ್ತಿಗೆ ಆದೇಶವನ್ನು ರದ್ದು ಮಾಡಿದ್ದರೂ ರದ್ದತಿಗೆ ಕಾರಣ ನೀಡದೆ ಇರುವುದು ಸಂಶಯಕ್ಕೆ ಕಾರಣವಾಗಿದೆ.

ಚಿಲುಮೆ ಸಂಸ್ಥೆಯ ಜೊತೆಗಿನ ಒಪ್ಪಂದವನ್ನು ರದ್ದುಮಾಡಿಕೊಂಡಿರುವ ಸಂದರ್ಭದಲ್ಲಿ ಈ ವರೆಗೆ ಅವರು ಸಂಗ್ರಹಿಸಿರುವ ಮಾಹಿತಿಯನ್ನು ಆ ಸಂಸ್ಥೆಯಿಂದ ಯಾಕೆ ಪಡೆದುಕೊಂಡಿಲ್ಲ? ಸಂಗ್ರಹಿಸಿದ ಮಾಹಿತಿಯನ್ನು ಬಿಬಿಎಂಪಿಗೆ ನೀಡಿದ್ದಾರೆಯೇ? ಬಿಬಿಎಂಪಿ ಅದನ್ನು ಹೇಗೆ ಬಳಸಿಕೊಂಡಿದೆ?

ಸದ್ಯಕ್ಕೆ ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆ ಬೆಂಗಳೂರು ಮಹಾನಗರಕ್ಕಷ್ಟೇ ಸೀಮಿತವಾಗಿದ್ದರೂ ಶೀಘ್ರದಲ್ಲಿಯೇ ಇದನ್ನು ಬೇರೆ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಯೋಚನೆ ಇತ್ತಂತೆ. ಈ ಬಗ್ಗೆಯೂ ತನಿಖೆ ನಡೆಯಬೇಕು.

40% ಭ್ರಷ್ಟಾಚಾರ ಮತ್ತು ಆಂತರಿಕ ಬಿಕ್ಕಟ್ಟಿನಲ್ಲಿ ಮುಳುಗಿಹೋಗಿರುವ ಬಿಜೆಪಿ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಾಮಮಾರ್ಗದಿಂದ ಗೆಲ್ಲಲು ಸಂಚು ಹೂಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳು ಮಾತ್ರವಲ್ಲ ಬಿಜೆಪಿ ಪಕ್ಷವೇ ಷಾಮೀಲಾಗಿದೆ.

ಇಂತಹ ಹಗರಣಗಳಿಂದ ಜನತೆ ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳಲಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಕೇಂದ್ರ ಚುನಾವಣಾ ಆಯೋಗ ತಕ್ಷಣ ಮಧ್ಯಪ್ರವೇಶಿಸಿ ತನಿಖೆಯಲ್ಲಿ ಸಹಕಾರ ನೀಡಬೇಕು.

ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಈ ಹಗರಣವನ್ನು ನಡೆಸಿರುವಂತೆ ಮೇಲ್ನೊಟಕ್ಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಇಡೀ ರಾಜ್ಯಕ್ಕೆ ಈ ಆಪರೇಷನ್ ವಿಸ್ತರಿಸುವ ದುರುದ್ದೇಶ ಇದ್ದಂತಿದೆ.

ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರು ಹಾಗೂ ಇತರರ ವಿರುದ್ಧ ಇಂದೇ ದೂರು ದಾಖಲಿಸುತ್ತೇವೆ. ಈ ಕೂಡಲೇ ಬಸವರಾಜ ಬೊಮ್ಮಾಯಿ ಅವರನ್ನು ಬಂಧಿಸಬೇಕು. ಒಂದು ವೇಳೆ ಅವರ ವಿರುದ್ಧ ಎಫ್,ಐ,ಆರ್ ದಾಖಲಿಸದಿದ್ದರೆ ಮುಂದಿನ ಕ್ರಮವನ್ನು ನಾವು ಕೈಗೊಳ್ಳುತ್ತೇವೆ.
,ಮತದಾರರ ಪಟ್ಟಿಯನ್ನು ಅಕ್ರಮವಾಗಿ ಪರಿಷ್ಕರಿಸುವ ಈ ರಾಜಕೀಯ ಸಂಚನ್ನು ಬಯಲಿಗೆಳೆಯುವ ಮೂಲಕ ಮಾಧ್ಯಮ ಧರ್ಮವನ್ನು ಎತ್ತಿಹಿಡಿದರುವ  ಮಾಧ್ಯಮ ಸಂಸ್ಥೆಗಳಿಗೆ ಅಭಿನಂದನೆಗಳು. ಈ ಸಂಸ್ಥೆಗಳ ಕಾರ್ಯ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು