ಬೆಂಗಳೂರು: ಕುಂದಲಹಳ್ಳಿ ಗೇಟ್ ಸಮೀಪದ ಬೇಕರಿ ನಡೆಸುತ್ತಿರುವ ಉಡುಪಿ ಜಿಲ್ಲೆಯ ಬೈಂದೂರು ಮೂಲದ ಹುಡುಗರಿಗೆ ಪುಡಿರೌಡಿಗಳು ಮನಸೋಇಚ್ಛೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದರೂ, ಇನ್ನೂ ಇಬ್ಬರು ಆರೋಪಿಗಳನ್ನು ಬಂದಿಸಿಲ್ಲದಿರುವುದರ ಕುರಿತು ಕರಾವಳಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಗರೇಟ್ ಹಣ ಕೇಳಿದಕ್ಕೆ ಅಂಗಡಿ ಹುಡುಗರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ 1.9 ಲಕ್ಷ ರೂ. ಎಗರಿಸಿ, ಪ್ರಾಣಬೆದರಿಕೆ ಹಾಕಿರುವ ಪ್ರಕರಣ ಕುಂದಲಹಳ್ಳಿಗೇಟ್ ಸಮೀಪದ ಕಾಂಡಿಮೆಂಟ್ಸ್ವೊಂದರಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಡೆಲಿವರಿ ಬಾಯ್ ಕಾರ್ತಿಕ್ (20), ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್ (20) ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್ (23) ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿದ್ದು ಅವರನ್ನೂ ಬಂಧಿಸಬೇಕು ಎಂದು ಕರಾವಳಿಗರು ಪೊಲೀಸರನ್ನು ಆಗ್ರಹಿಸಿದ್ದಾರೆ. ಈ ಯುವಕರ ಬೇಕರಿ ಪಕ್ಕದಲ್ಲೇ ಇನ್ನೊಂದು ಬೇಕರಿಯ ಮಾಲೀಕ ಮಂಜುನಾಥ ಎಂಬಾತ ಹಲ್ಲೆ ನಡೆಸಿ ಓಡಿಸಲು ಸುಪಾರಿ ಕೊಟ್ಟಿದ್ದಾನೆ. ಮಾತ್ರವಲ್ಲ ಈತ ಪೊಲೀಸರಿಗೆ ಮಾಮೂಲಿ ಕೊಡುತ್ತಿದ್ದ ಎನ್ನಲಾಗಿದೆ. ಮಾತ್ರವಲ್ಲದೆ ಬೇಕರಿಯಲ್ಲಿ ಗಲಾಟೆ ಆದ ತಕ್ಷಣವೇ ಹುಡುಗರು ಹೊಯ್ಸಳ ಪೊಲೀಸರಿಗೆ ದೂರವಾಣಿ ಮೂಲಕ ಘಟನೆಯನ್ನ ವಿವರಿಸಿದ್ದರೂ ನಮ್ಮ ಲಿಮಿಟ್ಸ್ ಅಲ್ಲ ಎಂದಿದ್ದಾರೆ.
ಮತ್ತೊಂದೆಡೆ ಆರೋಪಿಗಳನ್ನು ಸ್ಥಳೀಯ ರಾಜಕಾರಣಿಗಳು ರಕ್ಷಿಸುತ್ತಿರುವ ಸುಳಿವು ಸಿಕ್ಕಿದೆ. ಗೃಹ ಸಚಿವರು ನ್ಯಾಯ ಸಿಗದೇ ಹೋದರೆ ನಾವು ಮತ್ತೆ ಪ್ರತಿಭಟನೆ ನಡೆಸುವುದು ಅನಿವಾರ್ಯ. ಇದು ಒಂದು ದಿನದ ಶೋ ಅಲ್ಲ, ನ್ಯಾಯ ಸಿಗುವವರೆಗೂ ಮುಂದುವರಿಯಲಿದೆ ಎಂದು ಜೈ ಭಾರ್ಗವ ಬಳಗ ಹಾಗೂ ಇತರ ಕರಾವಳಿಗರು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಬೆಂಗಳೂರು ಪೊಲೀಸರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಈ ಹಲ್ಲೆ ಸಂಬಂಧಿಸಿದ ವಿಡಿಯೋ ದೃಶ್ಯದ ಫೋಟೋ ಪ್ರಕಟಿಸಲಾಗಿದ್ದು, ಅದರಲ್ಲಿ ಆರೋಪಿಗಳ ಮುಖವನ್ನು ಮರೆ ಮಾಚಿರುವುದರ ವಿರುದ್ಧವೂ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಲ್ಲಾ ಆರೋಪಿಗಳನ್ನು ಬಂಧಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.