ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳನ್ನು ದತ್ತು ಪಡೆಯಲು ಅನುಕೂಲವಾಗುವಂತೆ ಆನ್ ಲೈನ್ ಪೋರ್ಟಲ್ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಪ್ರಕಟಿಸಿದ್ದಾರೆ.
ಬೀದಿ ನಾಯಿಗಳ ಶುಶ್ರೂಷೆ ಮತ್ತು ಆರೈಕೆಗಾಗಿ, ಸಾರ್ವಜನಿಕರಿಗೆ ಸಹಾಯ ಮಾಡಲು ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಈ ಆನ್ಲೈನ್ ಪೋರ್ಟಲ್ ಮೂಲಕ, ಪ್ರಾಣಿ ಪ್ರಿಯರು ನಾಯಿಗಳನ್ನು ದತ್ತು ಪಡೆಯಲು ತಮ್ಮ ಹೆಸರುಗಳನ್ನು ನೋಂದಾಯಿಸಬಹುದು” ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದರು.
ಮುಧೋಳ ತಳಿ ಅಭಿವೃದ್ಧಿಗೆ 5 ಕೋಟಿ ರೂ.: ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ (ಐಸಿಎಆರ್) ಗುರುತಿಸಿರುವ ಮುಧೋಳ ಹೌಂಡ್ ಶ್ವಾನ ತಳಿಯ ಅಭಿವೃದ್ಧಿಗೆ 5 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದರು. ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಈ ತಳಿಯು ಭಾರತೀಯ ಸೇನೆಗೆ ಸೇರ್ಪಡೆಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ.ಗಳನ್ನು ನೀಡಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು. ಬೆಂಗಳೂರಿನಲ್ಲಿ ಗಾಯಗೊಂಡ ಮತ್ತು ಪರಿತ್ಯಕ್ತ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಸಂಚಾರಿ ಚಿಕಿತ್ಸಾಲಯಗಳನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದರು.
ಸ್ವತಃ ಪ್ರಾಣಿ ಪ್ರೇಮಿಯಾಗಿದ್ದ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ತಮ್ಮ ನೆಚ್ಚಿನ ನಾಯಿಯ ಅಂತಿಮ ವಿಧಿಗಳನ್ನು ನೆರವೇರಿಸುವಾಗ ಕಣ್ಣೀರಿಟ್ಟಿದ್ದರು.
‘777 ಚಾರ್ಲಿ’ ಸಿನಿಮಾ ನೋಡಿದ ನಂತರ ಭಾವುಕರಾಗಿದ್ದ ಅವರು, ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮ ನೆಚ್ಚಿನ ನಾಯಿಯನ್ನು ನೆನಪಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಣ್ಣೀರಿಟ್ಟಿದ್ದರು.