ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಬೀಳ್ಕೊಡುಗೆ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
“ಬಿಜೆಪಿಯ ಸಕ್ರಿಯ ಸದಸ್ಯರಾಗಿ, ಯಡಿಯೂರಪ್ಪ ಅವರ ಈ ಭಾಷಣ ಸ್ಪೂರ್ತಿದಾಯಕವಾಗಿದೆ. ಇದು ಖಂಡಿತವಾಗಿಯೂ ಪಕ್ಷದ ಇತರ ಕಾರ್ಯಕರ್ತರಿಗೆ ಸ್ಫೂರ್ತಿ ನೀಡುತ್ತದೆ” ಎಂದು ನರೇಂದ್ರ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ಹೇಳಿದ್ದಾರೆ.
ಯಡಿಯೂರಪ್ಪ ಅವರ ಭಾಷಣವನ್ನು ಒಳಗೊಂಡ ಬಿಜೆಪಿ ಕರ್ನಾಟಕ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದಾರೆ.
ಫೆಬ್ರವರಿ 22 ರಂದು, ಮಾಜಿ ಸಿಎಂ ಯಡಿಯೂರಪ್ಪ ನಾನು ಭವಿಷ್ಯದಲ್ಲಿ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸದನದಲ್ಲಿ ಘೋಷಿಸಿದ್ದರು. ಇದು ನನ್ನ ಕೊನೆಯ ಭಾಷಣ. ನೀವು ಇದನ್ನು ನನ್ನ ವಿದಾಯ ಭಾಷಣವೆಂದು ಪರಿಗಣಿಸಬಹುದು. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದೇನೆ.” ಎಂದು ಯಡಿಯೂರಪ್ಪ ಭಾವುಕರಾಗಿ ಪುನರುಚ್ಚರಿಸಿದ್ದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯ ವಲಯದಲ್ಲಿ ವಿರೋಧ ಪಕ್ಷಗಳು ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ ಮತ್ತು ನಿರ್ಲಕ್ಷಿಸಲಾಗಿದೆ ಎಂದು ಹೇಳುತ್ತಿವೆ. “ನನ್ನನ್ನು ಬಿಜೆಪಿ ಅಥವಾ ಪ್ರಧಾನಿ ನಿರ್ಲಕ್ಷಿಸಿಲ್ಲ” ಎಂದು ಅವರು ಸಮರ್ಥಿಸಿಕೊಂಡಿದ್ದರು.
ಪಕ್ಷವು ನನಗೆ ಉತ್ತಮ ಅವಕಾಶಗಳನ್ನು ನೀಡಿದೆ ಎಂದು ಪ್ರತಿಪಾದಿಸಿದ ಅವರು, ತಮ್ಮ ಕೊನೆಯ ಉಸಿರಿರುವವರೆಗೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. “ಬಿಜೆಪಿ ನನಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ” ಎಂದು ಅವರು ಹೇಳಿದ್ದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದರು. “ನಾನು ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳುತ್ತೇನೆ. ಈ ಅಧಿವೇಶನದ ನಂತರ ನಾನು ಕರ್ನಾಟಕದಾದ್ಯಂತ ಸಂಚರಿಸಲಿದ್ದೇನೆ. ನಾನು ಬಿಜೆಪಿಯ ಯೋಜನೆಗಳನ್ನು ಜನರಿಗೆ ತಿಳಿಸಬೇಕಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರವು ಬೇರೆ ಯಾವುದೇ ಸರ್ಕಾರಕ್ಕಿಂತ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದೆ” ಎಂದು ಯಡಿಯೂರಪ್ಪ ಹೇಳಿದ್ದರು.