ಬೆಂಗಳೂರು: ತನ್ನ ಸ್ನೇಹಿತನೊಂದಿಗೆ ಉದ್ಯಾನವನದಲ್ಲಿ ಕುಳಿತಿದ್ದ ಯುವತಿಯನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ನಡೆದಿದೆ. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸತೀಶ್, ವಿಜಯ್, ಶ್ರೀಧರ್ ಮತ್ತು ಕಿರಣ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮಾರ್ಚ್ 25 ರ ತಡರಾತ್ರಿ ಈ ಘಟನೆ ನಡೆದಿದೆ. ಯುವತಿ ತನ್ನ ಸ್ನೇಹಿತನೊಂದಿಗೆ ನ್ಯಾಷನಲ್ ಗೇಮ್ಸ್ ವಿಲೇಜ್ ಪಾರ್ಕ್‌ನಲ್ಲಿ ಕುಳಿತಿದ್ದಳು. ಆರೋಪಿಗಳು ಆಕೆಯ ಸ್ನೇಹಿತನಿಗೆ ಬೆದರಿಸಿ ಕಾರಿಗೆ ಎಳೆದೊಯ್ದಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳು ಕಾರನ್ನು ದೊಮ್ಮಲೂರು, ಇಂದಿರಾನಗರ, ಆನೇಕಲ್ ಮತ್ತು ನೈಸ್ ರಸ್ತೆಯಲ್ಲಿ ಓಡಾಡಿಸಿ ರಾತ್ರಿಯಿಡೀ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮಾರ್ಚ್ 26 ರಂದು ಮುಂಜಾನೆ ಆಕೆಯ ನಿವಾಸದ ಬಳಿ ಬಿಟ್ಟು ಹೋಗಿದ್ದಾರೆ. ಮುಂಜಾನೆ 4 ಗಂಟೆಗೆ ಮನೆಗೆ ತಲುಪಿದ ನಂತರ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಪೊಲೀಸರಿಗೆ ದೂರು ನೀಡಲಾಗಿದೆ.