ನೆಲಮಂಗಲ: ಶ್ರೀ ವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದಲ್ಲಿ 50ನೇ ವರ್ಷದ ಕಾರ್ತಿಕ ಲಕ್ಷ ದೀಪೋತ್ಸವ ಪ್ರಯುಕ್ತ, ವನಕಲ್ಲು ಮಲ್ಲೇಶ್ವರ ಸ್ವಾಮಿ ಮತ್ತು ಗಂಗೆ ಗೌರಿ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವು ನೆರವೇರಿದ್ದು, ಈ ಕಾರ್ಯಕ್ರಮವು ಕರ್ನಾಟಕ ಬುಕ್ ಆಫ್ ದಿ ರೆಕಾರ್ಡ್ ನಲ್ಲಿ ದಾಖಲಾಗುವುದರ ಮೂಲಕ ಶ್ರೀ ವನಕಲ್ಲು ಮಲ್ಲೇಶ್ವರ ಮಠ ಇತಿಹಾಸ ಮೆರೆದಿದೆ.
ಶ್ರೀ ವನಕಲ್ಲು ಮಲ್ಲೇಶ್ವರ ಕ್ಷೇತ್ರವು ಬಹಳ ಪುರಾತನವಾದದ್ದು, 14ನೇ ಶತಮಾನದಲ್ಲಿ ಪ್ರೌಢದೇವರಾಯನ ಕಾಲದಲ್ಲಿ ಶರಣ ಸಂತರು ಜಪ ತಾಪಗೈದಿದ್ದ ಪುಣ್ಯಕ್ಷೇತ್ರವಿದು, ಈ ಕ್ಷೇತ್ರದಲ್ಲಿ, ಯಾವುದೇ ಜಾತಿ ಮತಗಳ ಭೇದವಿಲ್ಲದೆ ಸರ್ವ ಸಮುದಾಯದವರು ಭಕ್ತರಾಗಿ ಭಕ್ತಿ ಅರ್ಪಿಸುತ್ತಾ ಬಂದಿದ್ದಾರೆ. ಮೊದಲನೆಯ ಪೀಠಾಧ್ಯಕ್ಷರಾದ ಶರಣ ಸದಾಶಿವಯ್ಯ ಸ್ವಾಮೀಜಿಯವರು ಪ್ರಾರಂಭಿಸಿದ ಕಾರ್ತಿಕ ದೀಪೋತ್ಸವವು ಇಂದು ಸಾರ್ಥಕ ಕಂಡಿದೆ, ಎರಡನೆಯ ಪೀಠಾಧಿಪತಿಯಾಗಿ ಶ್ರೀ ಮಠವನ್ನು ಮುನ್ನಡೆಸಿದ ಕಾಯಕಯೋಗಿ ಶ್ರೀ ಸಿದ್ದ ಯೋಗಾನಂದ ಮಹಾ ಸ್ವಾಮೀಜಿ ಅವರು ಈ ಮಠದ ಅನಾಥಾಶ್ರಮ, ವೃದ್ಧಾಶ್ರಮ ಪ್ರಾರಂಭಿಸಿ ಶ್ರೀ ಕ್ಷೇತ್ರಕ್ಕೆ ಕಾಯಕಲ್ಪ ನೀಡಿದವರಾಗಿದ್ದಾರೆ.