ಬೆಂಗಳೂರು, ಫೆ. 09 : ಹಿಜಾಬ್ ವಿವಾದ ನಮ್ಮ ಪಿತೂರಿಯಲ್ಲ, ಕಾಂಗ್ರೆಸ್‌ನವರ ಪಿತೂರಿ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ವಿದ್ಯಾರ್ಥಿಯನ್ನು ಸದ್ಯಕ್ಕೆ ಬಂಧಿಸಿಲ್ಲ. ಲಾಠಿಚಾರ್ಚ್ ಗೆ ಸಂಬಂಧಿಸಿದಂತೆ ಹೊರಗಿನವರನ್ನು ಬಂಧಿಸಲಾಗಿದೆ. ಆದರೆ, ತಪ್ಪು ಯಾರೇ ಮಾಡಿದ್ದರೂ ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹಿಜಾಬ್ ವಿವಾದ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವರು, ರಾಜ್ಯದ ವಿವಿಧೆಡೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವಿಕೆ ನಡುವೆ ಉಂಟಾಗಿರುವ ಕೋಮು ಸಂಘರ್ಷದಲ್ಲಿ ಯಾರೇ ಭಾಗಿಯಾಗಿದ್ದರೂ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಲಾ ಸಮವಸ್ತ್ರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬ ಹಿರಿಯ ರಾಜಕಾರಣಿ. ಸತ್ಯ ಗೊತ್ತಿಲ್ಲದೇ ಮಾತನಾಡಿದ್ದಾರೆ. ದೇಶಕ್ಕೆ ಬೆಂಕಿ ಹಚ್ಚಲು ಹೋಗಿ ಈಗಲೇ ಕಳೆದು ಹೋಗಿದ್ದಾರೆ. ಇದೇ ರೀತಿ ಬೆಂಕಿ ಹಚ್ಚುವ ಕೆಲಸ ಮಾಡಿದರೆ ಕಾಂಗ್ರೆಸ್ ನ್ನು ಈ ಬಾರಿ ಜನ ಅರಬ್ಬೀ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ಶಾಲಾ ಸಮವಸ್ತ್ರ ವಿಚಾರದಲ್ಲಿ ಬೆಂಕಿಗೆ ತುಪ್ಪು ಸುರಿಯುತ್ತಿದ್ದಾರೆ. ಶಿವಮೊಗ್ಗದ ಕಾಲೇಜಿನಲ್ಲಿ ರಾಷ್ಟ್ರ ಧ್ವಜ ಇಳಿಸಿ ಭಗವಾ ಧ್ವಜ ಕಟ್ಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ಇಲ್ಲದೇ ಸುಳ್ಳು ಹೇಳಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಯಾವಾಗಲೂ ರಾಷ್ಟ್ರ ಧ್ವಜ ಹಾರಿಸುವುದಿಲ್ಲ. ಶಾಸನ ಸಭೆ, ಸಂಸತ್ ಭವನದ ಮೇಲೆ ರಾಷ್ಟ್ರಧ್ವಜ ಹಾರಾಡುತ್ತದೆ. ಮಾಹಿತಿ ಇಲ್ಲದೇ ಹಿರಿಯ ರಾಜಕಾರಣಿ ಡಿ.ಕೆ ಶಿವಕುಮಾರ್ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ಈ ರೀತಿಯ ಸುಳ್ಳುಗಳಿಂದ ದೇಶದಲ್ಲಿ ಕಳೆದು ಹೋಗಿದ್ದಾರೆ. ಈಗಲೂ ಅದೇ ಮಾಡಿದರೆ, ಕಾಂಗ್ರೆಸ್ ಪಕ್ಷವನ್ನು ಜನರು ಅರಬ್ಬೀ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಆರಗ ಜ್ಞಾನೇಂದ್ರ ಕಿಡಿ ಕಾರಿದ್ದಾರೆ.
ವಿಧ್ಯಾರ್ಥಿಗಳ ಮನಸಿನಲ್ಲಿ ಮತೀಯ ಭಾವನೆಗಳನ್ನು ತುಂಬಬಾರದು. ನಿನ್ನೆಯ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ, ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಪ್ರೇರಣಾ ಶಕ್ತಿಗಳು ಯಾರಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಆಗಲಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ನಡೆದಿರುವ ಅಹಿತಕರ ಘಟನೆ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಇದರಲ್ಲಿ ಯಾವುದೇ ಸಂಘಟನೆಗಳು ಇಲ್ಲವೇ ಯಾವುದಾದರು ಮುಖಂಡರು ಭಾಗಿಯಾಗಿದ್ದರೂ ಕಾನೂನು ಕ್ರಮ ಖಚಿತ ಎಂದು ಗುಡುಗಿದರು.
ಗಲಭೆ ನಡೆದಿರುವುದನ್ನು ಅವಲೋಕಿಸಿದರೆ ಇದರ ಹಿಂದೆ ಕೆಲವು ಕಾಣದ ಮತೀಯ ಶಕ್ತಿಗಳ ಕೈವಾಡ ಇರುವುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಗಲಭೆಗೆ ಪ್ರಚೋದಿಸಿದವರು ಹಾಗೂ ಭಾಗಿಯಾದವರನ್ನು ಪತ್ತೆಹಚ್ಚುವ ಕೆಲಸವನ್ನು ಪೊಲೀಸರು ಆರಂಭಿಸಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡವರಿಗೆ ಕಾನೂನಿನ ಮೂಲಕವೇ ಶಿಕ್ಷೆಯಾಗಲಿದೆ ಎಂದು ಹೇಳಿದರು.