News Karnataka Kannada
Friday, April 19 2024
Cricket
ಬೆಂಗಳೂರು ನಗರ

ಅರೋಗ್ಯ ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆ: ಹಾಜರಾತಿ ಆಧರಿಸಿ ವೇತನ ಪಾವತಿಸುವ ವ್ಯವಸ್ಥೆ

Dr. Sudhakar
Photo Credit :

ರಾಜ್ಯದ ಅರೋಗ್ಯ ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಯೋಮೆಟ್ರಿಕ್‌ ಹಾಜರಾತಿ ಆಧರಿಸಿ ವೇತನ ಪಾವತಿಸುವ ವ್ಯವಸ್ಥೆ ಕಡ್ಡಾಯಗೊಳಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಆಸ್ಪತ್ರೆ, ಇಲಾಖೆ ಕಚೇರಿ ಮತ್ತು ಸಂಸ್ಥೆಗಳಲ್ಲಿ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದಿರುವ ಬಗ್ಗೆ ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ದೂರುಗಳು ಬಂದಿವೆ. ನಿಜವಾದ ಕಾರಣಗಳಿಲ್ಲದೆ ಕೆಲಸ ಮಾಡದಿರುವುದನ್ನು ಸಹಿಸಲು ಆಗುವುದಿಲ್ಲ. ಅವರ ಕರ್ತವ್ಯಲೋಪದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಹೀಗಾಗಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದ ಯಾರೇ ಆಗಲಿ ಅಂತಹವರ ವೇತನ ಕಡಿತಕ್ಕೆ ಸೂಚನೆ ನೀಡಲಾಗಿದೆ.ಇಲಾಖೆ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೂ ಅವರ ‘ಆಧಾರ್‌ ‘ ಆಧರಿತ ಬಯೋಮೆಟ್ರಿಕ್‌ ಹಾಜರಾತಿ (ಎಇಬಿಎಎಸ್‌) ಕಡ್ಡಾಯಗೊಳಿಸಲಾಗಿದೆ. ಅದನ್ನು ಆಧರಿಸಿಯೇ ಇನ್ನು ಮುಂದೆ ವೇತನ ನೀಡುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಯೋಮೆಟ್ರಿಕ್‌ ಹಾಜರಾತಿ ಕಳೆದ ಎರಡು ತಿಂಗಳ ಹಿಂದಿನಿಂದಲೇ ಮತ್ತೆ ಕಡ್ಡಾಯಗೊಳಿಸಲಾಗಿದೆ. ಆದರೂ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಾಜರಾತಿ ದಾಖಲಿಸದಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗ ಸ್ಪಷ್ಟ ಎಚ್ಚರಿಕೆ ಜತೆಗೆ ಅಧಿಕೃತ ಆದೇಶ ನೀಡಿದ್ದುಅಂತಹ ಪ್ರಕರಣಗಳನ್ನು ಗೈರು ಹಾಜರಿ ಎಂದು ಪರಿಗಣಿಸಿ ವೇತನ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಇಲಾಖೆಯ ಆಸ್ಪತ್ರೆ, ಸಂಸ್ಥೆ ಮತ್ತು ಕೇಂದ್ರಗಳ ಜವಾಬ್ದಾರಿ ನಿರ್ವಹಿಸುವ ಡಿಡಿಒ ( ಸ್ಯಾಲರಿ ಡ್ರಾಯಿಂಗ್‌ ಆಫೀಸರ್‌)ಗಳು ಪ್ರತೀ ತಿಂಗಳು ಎಇಬಿಎಎಸ್‌ ನಲ್ಲಿ ತಮ್ಮ ವ್ಯಾಪ್ತಿಯ ಎಲ್ಲ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ಅದರ ಅನುಸಾರವೇ ವೇತನ ಪಾವತಿಗೆ ವರದಿ ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ (ಡಿಎಚ್‌ಒ) ಸಲ್ಲಿಸಬೇಕು.ಅವರು ಅದನ್ನು ಪರಿಶೀಲಿಸಿ ವೇತನ ಬಿಡುಗಡೆ ಮತ್ತು ಕಡಿತಕ್ಕೆ ಸೂಚನೆ ನೀಡಲಿದ್ದಾರೆ. ಡಿಎಚ್‌ಒ ಅವರು ಕೈಗೊಂಡ ಕ್ರಮಗಳನ್ನ ಮೇಲಿನ ಹಂತದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು

ಯಾರೇ ಆಗಲಿ ಶೇ.80ರಷ್ಟು ಹಾಜರಾತಿಗಿಂತ ಕಡಿಮೆ ಇದ್ದಲ್ಲಿ ಅವರ ವೇತನ ತಡೆ ಹಿಡಿಯಲಾಗುತ್ತದೆ. ನಂತರ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ವಹಿಸಲಾಗುವುದು. ಒಂದು ವೇಳೆ ಶೇ.80ರಷ್ಟು ಹಾಜರಾತಿ ಇದ್ದಲ್ಲಿ ವೇತನ ಬಿಡುಗಡೆ ಮಾಡಿ ಉಳಿದ ಶೇ.20 ಹಾಜರಾತಿ ದಾಖಲು ಮಾಡದಿರುವುದಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗುತ್ತದೆ. ಸಿಬ್ಬಂದಿ ನೀಡುವ ಕಾರಣ ನಿಜವಾಗಿದ್ದಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗುವುದು. ಒಂದು ವೇಳೆ ಸಬೂಬು ನೀಡಿದರೆ ಅಥವಾ ನೀಡಿರುವ ಮಾಹಿತಿ ಸುಳ್ಳು ಆಗಿದ್ದಲ್ಲಿ ಮುಂದಿನ ತಿಂಗಳ ವೇತನದಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನುಕಡಿತಗೊಳಿಸಲಾಗುವುದು ಎಂದರು.
ಒಂದು ವೇಳೆ ಎಇಬಿಎಎಸ್‌ ಅನುಷ್ಟಾನಗೊಳಿಸದೆ, ಹಾಜರಾತಿ ಪರಿಶೀಲಿಸದೆ ವೇತನ ಪಾವತಿಸಿದರೆ ಆಯಾ ಡಿಡಿಒಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು.
ಪ್ರತಿ ವಾರ ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಉಳಿದ ಅಂಶಗಳ ಜತೆಗೆ ಹಾಜರಾತಿ ಕಡ್ಡಾಯ ಮತ್ತು ವೇತನಕ್ಕೆ ಸಂಯೋಜನೆಗೊಳಿಸಿರುವ ವ್ಯವಸ್ಥೆಯನ್ನು ಪರಾಮರ್ಶೆ ಮಾಡಲಾಗುತ್ತಿದೆ. ಅನುಷ್ಟಾನದಲ್ಲಿ ಲೋಪ ಕಂಡರೆ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದರು.

ಹಾಜರಾತಿ ದಾಖಲು ವೇಳಾಪಟ್ಟಿ:

1. ಆಡಳಿತ ಕಚೇರಿಗಳು: ಬೆಳಗ್ಗೆ – 10 , ಮಧ್ಯಾಹ್ನ- 1, ಸಂಜೆ – 5.30.

2. ಆಸ್ಪತ್ರೆಗಳು : ಬೆಳಗ್ಗೆ – 9, ಮಧ್ಯಾಹ್ನ – 1, ಸಂಜೆ – 4.30 (ಸಾರ್ವತ್ರಿಕ ರಜಾ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಮಾತ್ರ)

3. ಆಸ್ಪತ್ರೆಗಳಲ್ಲಿ ಪಾಳಿಯಲ್ಲಿ ಕೆಲಸ ಮಾಡುವವರು: 1ನೇ ಪಾಳಿ – ಬೆಳಗ್ಗೆ-8, ಬೆಳಗ್ಗೆ- 11, ಮಧ್ಯಾಹ್ನ- 2 , 2ನೇ ಪಾಳಿ ಮಧ್ಯಾಹ್ನ- 2 , ಸಂಜೆ – 5, ರಾತ್ರಿ – 8, 3ನೇ ಪಾಳಿ ರಾತ್ರಿ- 8, ಮಧ್ಯರಾತ್ರಿ 12, ಮರುದಿನ ಬೆಳಗ್ಗೆ- 8 (ತಾಂತ್ರಿಕ ಅಡಚಣೆ ಇರುವ ಕಡೆ ಮಧ್ಯ ರಾತ್ರಿ 12ಕ್ಕೆ ಬೇಡ, ಸಮಸ್ಯೆ ಬಗೆಹರಿದ ಬಳಿಕ ಕಡ್ಡಾಯ)

4. ವಿಶೇಷ ಸಂದರ್ಭಗಳಲ್ಲಿ (ಅಪಘಾತ, ತುರ್ತು ಸೇವೆ, ಆಪರೇಷನ್‌) ಕರ್ತವ್ಯ ನಿರತ ವೈದ್ಯರು, ಶುಶ್ರೂಷಕ ಸಿಬ್ಬಂದಿ ಮೂರು ಬಾರಿ ಹಾಜರಾತಿ ಹಾಕಲು ಸಾಧ್ಯವಾಗದಿದ್ದಲ್ಲಿ ಸದರಿ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರು ಅಥವಾ ಆಡಳಿತ ವೈದ್ಯಾಧಿಕಾರಿಗಳು ಖಾತರಿಪಡಿಸಿಕೊಂಡು ಆ ದಿವಸಗಳಲ್ಲಿ ವಿನಾಯಿತಿ ನೀಡಬಹುದು. ಆದರೆ ಕನಿಷ್ಟ ಎರಡು ಬಾರಿ (ಆಗಮನ ಮತ್ತು ನಿರ್ಗಮನ) ಹಾಜರಾತಿ ದಾಖಲಿಸಲೇಬೇಕು.

ಇಲಾಖೆಯಲ್ಲಿ ಇರುವ ಒಟ್ಟು ಸಂಸ್ಥೆಗಳು: 3,230

ಒಟ್ಟು ಅಧಿಕಾರಿ ಮತ್ತು ಸಿಬ್ಬಂದಿ : 65,318

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು