News Karnataka Kannada
Friday, April 26 2024
ಬೆಂಗಳೂರು ನಗರ

ನಲಪಾಡ್​ನಿಂದ ಬೆದರಿಕೆ – ಪೊಲೀಸ್ ರಕ್ಷಣೆ ಕೋರಿದ ಯುವ ಕಾಂಗ್ರೆಸ್ ನಾಯಕಿ ಭವ್ಯಾ

Photo Credit :

ನಲಪಾಡ್​ನಿಂದ ಬೆದರಿಕೆ – ಪೊಲೀಸ್ ರಕ್ಷಣೆ ಕೋರಿದ ಯುವ ಕಾಂಗ್ರೆಸ್ ನಾಯಕಿ ಭವ್ಯಾ

ಬೆಂಗಳೂರು : ಶಾಸಕ ಎನ್.ಎ. ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಮತ್ತವರ ಬೆಂಬಲಿಗರಿಂದ ತಮಗೆ ಪ್ರಾಣಾಪಾಯ ಇದೆ ಎಂದು ಆರೋಪಿಸಿರುವ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಕೆ ಆರ್ ಭವ್ಯಾ ಪೊಲೀಸ್ ರಕ್ಷಣೆ ಕೋರಿದ್ದಾರೆ. ನಿನ್ನೆ ಬುಧವಾರ ಮಧ್ಯಾಹ್ನ ನಲಪಾಡ್ ಮತ್ತವರ ಬೆಂಬಲಿಗರು ತಮ್ಮ ಮೇಲೆ ಬೆದರಿಕೆ ಹಾಕಿಹೋಗಿದ್ದಾರೆ ಎಂದು ಭವ್ಯಾ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನೀಡಿದ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿಂದೆಯೂ ತಮ್ಮ ಮೇಲೆ ನಲಪಾಡ್ ಬೆದರಿಕೆ ಹಾಕಿದ ಘಟನೆಗಳನ್ನ ಭವ್ಯಾ ಮೂರು ಪುಟಗಳಿರುವ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೆ ಆರ್ ಭವ್ಯಾ ಅವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಭವ್ಯಾ ಇಂದು ದೂರು ಕೊಡಲು ಕಾರಣವಾಗಿದ್ದು ನಿನ್ನೆ ರೇಸ್ ಕೋರ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಲಾದ ವಾರ್ ರೂಮ್ ವಿಚಾರ. ಕೋವಿಡ್​ನಿಂದ ಬಳಲುತ್ತಿರುವವರಿಗೆ ಆಸ್ಪತ್ರೆ, ಔಧ, ಪ್ಲಾಸ್ಮಾದ ವ್ಯವಸ್ಥೆ ನೋಡಿಕೊಳ್ಳಲು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷ ರಾಮಯ್ಯ ಅವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಚೇರಿಯಲ್ಲಿ ವಾರ್ ರೂಮ್ ಸಿದ್ಧತೆ ಮಾಡುತ್ತಿದ್ದಾಗ ಮೊಹಮ್ಮದ್ ನಲಪಾಡ್ ಮತ್ತವರ ಬೆಂಬಲಿಗರು ಬಂದು ಗಲಾಟೆ ಮಾಡಿದ್ದಾರೆ ಎಂದು ಭವ್ಯಾ ವಿವರಿಸಿದ್ದಾರೆ.
ಶಾಸಕ ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15ಕ್ಕೂ ಹೆಚ್ಚು ಜನರು ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬಯ್ದು ಹೊಡೆಯುವ ಹಾಗೆ ಕೈ ತೋರಿಸಿದರು. ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲೇ ನಿಂದಿಸಿ ಅಲ್ಲಿಂದ ಹೊರಟುಹೋದರು. ಅರ್ಧ ಗಂಟೆ ನಂತರ ಯೋರೋ ಐವರು ಜನರು ಬಂದು ‘ನಮ್ಮ ಬಾಸ್ ನಲಪಾಡ್ ಅವರ ತಂಟೆಗೆ ಬಂದರೆ ನಾವು ನಿಮ್ಮಗಳನ್ನ ಕೆಲಸ ಮಾಡಲು ಬಿಡುವುದಿಲ್ಲ’ ಎಂದು ಹೇಳಿಹೋದರು. ಇವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ನಮಗೆ ಸೂಕ್ತ ಬಂದೋಬಸ್ತ್ ಮಾಡಬೇಕು ಎಂದು ಕೆಪಿಸಿಸಿ ಯುವ ಉಪಾಧ್ಯಕ್ಷೆ ಭವ್ಯಾ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬಸವ ಕಲ್ಯಾಣ ಕ್ಷೇತ್ರದ ಉಪಚುನಾವಣೆ ವೇಳೆ ತಮ್ಮ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಮೊಹಮ್ಮದ್ ನಲಪಾಡ್ ಕಡೆಯವರು ಅಪಪ್ರಚಾರ ಮಾಡಿದ್ದಾರೆ. ಬಸವಕಲ್ಯಾಣದಲ್ಲಿ ಪ್ರಚಾರಕ್ಕೆ ಹೋದಾಗ ತಮಗೆ ತೊಂದರೆ ಕೂಡ ಕೊಟ್ಟಿದ್ದಾರೆ, ಗೂಂಡಾಗಿರಿ ನಡೆಸಿದ್ದಾರೆ… ದೆಹಲಿಯಲ್ಲೂ ಕೂಡ ನಲಪಾಡ್ ನನ್ನ ಮೇಲೆ ಕೂಗಾಡಿದ್ದಾರೆ. ಕೆಲ ಶಾಸಕರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಿಗೇ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನಲಪಾಸ್ ಹಾಗೂ ಅವರ ಬೆಂಬಲಿಗರು ನನಗೆ ಏನು ಮಾಡುತ್ತಾರೋ ಎಂಬ ಭಯ ಇದೆ. ನನಗೆ ರಕ್ಷಣೆ ಕೊಡಿ. ಹಾಗೂ ಅವರನ್ನ ಕರೆಸಿ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಿ ಎಂದು ಭವ್ಯಾ ಒತ್ತಾಯಿಸಿದ್ಧಾರೆ.
ಮೊಹಮ್ಮದ್ ನಲಪಾಡ್ ಈ ಹಿಂದೆಯೇ ಕೆಲವು ವಿವಾದಗಳಿಗೆ ಒಳಗಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗಳಿಸುವುದರಿಂದ ವಂಚಿತರಾಗಿದ್ದರು. ಮೂರು ವರ್ಷಗಳ ಹಿಂದೆ ಯುಬಿ ಸಿಟಿಯಲ್ಲಿ ವಿದ್ವತ್ ಮೇಲೆ ನಲಪಾಡ್ ಹಲ್ಲೆ ಎಸಗಿದ ಘಟನೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ನಲಪಾಡ್ ಮತ್ತವರ ಬೆಂಬಲಿಗರು ವಿದ್ವತ್ ಮೇಲೆ ಮನಸೋ ಇಚ್ಛೆ ಹಲ್ಲೆ ಎಸಗಿದ್ದರು. ಈ ಘಟನೆ ನಲಪಾಡ್ ರಾಜಕೀಯ ಪ್ರಗತಿಗೆ ಪ್ರಮುಖ ತಡೆಯಾಗಿದೆ. ಈಗ ಭವ್ಯಾ ಮೇಲೆ ಬೆದರಿಕೆ ಹಾಕಿದ ಆರೋಪ ಬಂದಿರುವುದು ಅವರಿಗೆ ಇನ್ನಷ್ಟು ಮುಳುವಾಗುವ ಸಾಧ್ಯತೆ ಇಲ್ಲದಿಲ್ಲ.
ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ನಲಪಾಡ್ ಪರ ಒಂದು ಗುಂಪು ಇದ್ದರೆ, ರಕ್ಷ ರಾಮಯ್ಯ ಪರ ಇನ್ನೊಂದು ಗುಂಪು ಇದೆ. ಈ ಗುಂಪುಗಳ ಮಧ್ಯೆ ಹಲವು ದಿನಗಳಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮೊಹಮ್ಮದ್ ನಲಪಾಡ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕೃಪಾಶೀರ್ವಾದ ಇದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.ಇದೀಗ ಯೂತ್ ಕಾಂಗ್ರೆಸ್ ಕಚೇರಿಯಲ್ಲಿ ವಾರ್ ರೂಮ್ ಸ್ಥಾಪನೆಯನ್ನು ನಲಪಾಡ್ ಬೆಂಬಲಿಗರು ತಡೆದಿದ್ದಾರೆ. ವಾರ್ ರೂಮ್ ನಿರ್ಮಿಸಲು ಇತರ ಯುವ ಕಾರ್ಯಕರ್ತರು ಬರದಂತೆ ಕಚೇರಿ ಸುತ್ತ ನಲಪಾಡ್ ಬೆಂಬಲಿಗರು ಕಾವಲು ಕಾದಿದ್ದಾರೆ ಎಂಬ ಮಾಹಿತಿ ಇದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು