
ಬೆಂಗಳೂರು, : ಮೊನ್ನೆ ಮೊನ್ನೆಯಷ್ಟೇ ಚಿತ್ರದುರ್ಗದಲ್ಲಿ ಇಂಥದ್ದೇ ಸಂಗತಿ ನಡೆದಿತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರೈತ ಲಕ್ಷ್ಮಣ್ ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದು, ಕೋಲಾರ ಎಪಿಎಂಸಿಗೆ ಅದನ್ನು ಕೊಂಡೊಯ್ದಾಗ ಬರೀ ಹತ್ತು ರೂ ಲಾಭ ಸಿಕ್ಕಿತ್ತು.
ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಸಾವಿರಾರು ರೈತರ ಪಾಡು ಹೀಗೇ ಆಗಿದೆ. ಕೆಲವು ರೈತರು ತೋಟಗಳಲ್ಲಿ ಬೆಳೆಗಳನ್ನು ಹಾಗೇ ಬಿಡುತ್ತಿದ್ದರೆ, ಬೆಳೆಗಳನ್ನು ಕಟಾವು ಮಾಡಿದ ರೈತರು ಮಾರುಕಟ್ಟೆಗೆ ಸಾಗಿಸಲೂ ಆಗದೇ, ಸಾಗಿಸಿದರೂ ಸೂಕ್ತ ಬೆಲೆ ಸಿಗದೇ ಒದ್ದಾಡುವಂತಾಗಿದೆ. ಬೆಳೆಗಳಿಗೆ ಸಿಗುತ್ತಿರುವ ಪುಡಿಗಾಸು ನೋಡಿ ಮಾರುಕಟ್ಟೆಗೆ ಹೋಗುವುದೇ ಬೇಡ ಎಂದು ಕೆಲವು ರೈತರು ನಿರ್ಧಾರ ಮಾಡಿದ್ದಾರೆ. ಬೆಂಗಳೂರಿನ ತಾವರೆಕೆರೆ ದೊಡ್ಡೇರಿ ರೈತರ ಕಥೆಯೂ ಹೀಗೇ ಆಗಿದೆ. ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸುತ್ತಿರುವ ರೈತರ ಸ್ಥಿತಿ ಕೇಳುವವರಿಲ್ಲದಾಗಿದೆ. ಬೆಂಗಳೂರಿನ ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ದೊಡ್ಡೇರಿ ರೈತ ಗಿಲ್ಕಾನಾಯ್ಕ ಸ್ಥಿತಿ ಕೂಡ ಇದೇ ಆಗಿದೆ. ತಾನು ಬೆಳೆದ ಟೊಮೆಟೊಗೆ ಸಿಕ್ಕ ಬೆಲೆ ನೋಡಿ ನಿರಾಶೆಯಿಂದ ಟೊಮೆಟೊವನ್ನು ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ರೈತ ಗಿಲ್ಕಾನಾಯ್ಕ ಹತ್ತು ಎಕರೆ ಪ್ರದೇಶದಲ್ಲಿ ಹೈಬ್ರೀಡ್ ಟೊಮೆಟೊ ಬೆಳೆ ಬೆಳೆದಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಟೊಮೆಟೊ ಮಾರಾಟ ಸಾಧ್ಯವಾಗಿಲ್ಲ. ಈ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶಕ್ಕೆ ಇವರು ಬೆಳೆದ ರಫ್ತು ಮಾಡುತ್ತಿದ್ದರು. ಆದರೆ ಇದೀಗ ಲಾಕ್ ಡೌನ್ ಹಿನ್ನಲೆಯಲ್ಲಿ ಯಾವುದೇ ರಫ್ತು ನಡೆಯುತ್ತಿಲ್ಲ. ಹೀಗಾಗಿ ಉಚಿತವಾಗಿ ಸ್ಥಳೀಯರಿಗೆ ಹಂಚುತ್ತಿದ್ದಾರೆ. ಟೊಮೆಟೊ ಬೆಳೆಯನ್ನು ಎಪಿಎಂಸಿಗೆ ತೆಗೆದುಕೊಂಡು ಹೋದರೆ 17 ಕೆ.ಜಿ ಬಾಕ್ಸ್ ಅನ್ನು ಕೇವಲ 3 ರೂಪಾಯಿ ಕೇಳ್ತಾರೆ. ಈ ಬೆಲೆ ಕೇಳಿ ಕಂಗಾಲಾಗಿ ಹೋದೆ. ಇಷ್ಟು ನಷ್ಟದಲ್ಲಿ ಮಾರುವುದಕ್ಕಿಂತ ಜನರಿಗೆ ಉಚಿತವಾಗಿ ಹಂಚುವುದೇ ಒಳ್ಳೆಯದು ಎಂದು ಜನರಿಗೆ ಹಂಚುತ್ತಿದ್ದೇನೆ ಎನ್ನುತ್ತಾರೆ ಗಿಲ್ಕಾನಾಯ್ಕ್.