ಬೆಂಗಳೂರು: ಜನವರಿಯೊಳಗೆ ಸುಮಾರು 1200 ಮೆಗಾವ್ಯಾಟ್ ಹೆಚ್ಚುವರ ವಿದ್ಯುತ್ ಲಭ್ಯವಾಗಲಿದೆ. ಹೀಗಾಗಿ ರಾಜ್ಯಾದ್ಯಂತ ಪೀಕ್ ಅವರ್ ಲೋಡ್ಶೆಡ್ಡಿಂಗ್ ಸ್ಥಗಿತಗೊಳಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತದಿಂದ ವಿದ್ಯುತ್ ಖರೀದಿಸಲು ಅಲ್ಪಾವಧಿ ಟೆಂಡರ್ ಕರೆಯಲಾಗಿದ್ದು, ಇನ್ನೆರಡು ದಿನಗಳಲ್ಲಿ ಆರ್ಥಿಕ ಬಿಡ್ ತೆರೆಯಲಾಗುವುದು. ಇದಾದ ಕೂಡಲೇ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ನ. 6ರಂದು ಕೇರಳದಲ್ಲಿ ದೇಶದ ಎಲ್ಲಾ ರಾಜ್ಯಗಳ ಇಂಧನ ಸಚಿವರ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ತಾವೂ ಭಾಗವಹಿಸಿ ರಾಜ್ಯಕ್ಕೆ ಕೇಂದ್ರ ಮತ್ತು ಇತರೆ ರಾಜ್ಯಗಳಿಂದ ವಿದ್ಯುತ್ ತರಿಸಿಕೊಳ್ಳಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಕೊಂಚ ಇಳಿಮುಖವಾಗಲಿದೆ. ಜತೆಗೆ ಜನವರಿಯಿಂದ ಮಕ್ಕಳ ಪರೀಕ್ಷಾ ಸಿದ್ಧತೆಗಳು ಆರಂಭವಾಗುತ್ತವೆ. ಅವರಿಗೆ ತೊಂದರೆಯಾಗದಂತೆ ಪೀಕ್ ಅವರ್ನಲ್ಲಿ ಲೋಡ್ಶೆಡ್ಡಿಂಗ್ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಜನವರಿಯಿಂದ ಬೆಂಗಳೂರು ನಗರದಲ್ಲಿ ಯಾವುದೇ ಲೋಡ್ಶೆಡ್ಡಿಂಗ್ ಇಲ್ಲದೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.