ಬೆಂಗಳೂರು: ಬಡಮಕ್ಕಳಿಗೆ ಆಹಾರ ಪೂರೈಸುವ ಯೋಜನೆಯ ಟೆಂಡರ್ ಹಂಚಿಕೆಯಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರ ಪತ್ನಿ ವಿಜಯಾ ಅವರು ಏಳು ಲಕ್ಷ ರೂ ಲಂಚ ಪಡೆದಿರುವ ಆರೋಪ ಕೇಳಿ ಬಂದಿದೆ.
ಇದರಿಂದಾಗಿ ಸಚಿವ ಆಂಜನೇಯ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಒತ್ತಾಯ ಎಲ್ಲೆಡೆಯಿಂದಲೂ ಕೇಳಿ ಬರುತ್ತಿದೆ. ಪರಿಶಿಷ್ಟ ಜಾತಿ,ವರ್ಗದ ಮಕ್ಕಳಿಗೆ ಊಟ ಒದಗಿಸುವ ಏಳು ಕೋಟಿ ರೂ.ಗೂ ಅಧಿಕ ಮೊತ್ತದ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಭಾಕರ್ ಅವರನ್ನು ಸಂಪರ್ಕಿಸಿದ ಕೆಲ ವ್ಯಕ್ತಿಗಳು ಅವರ ಮೂಲಕ ವ್ಯವಹಾರ ಕುದುರಿಸಿರುವ ಮತ್ತು ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಿರುವ ವಿವರಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಹಿರಂಗಗೊಂಡಿವೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಚಿವರ ನಿವಾಸಕ್ಕೆ ನಿಮ್ಮನ್ನು ಕರೆದೊಯ್ಯುತ್ತೇನೆ. ನೀವು ಹಣ ರೆಡಿ ಮಾಡಿಕೊಳ್ಳಿ ಎಂದು ಪ್ರಭಾಕರ್ ಹೇಳಿರುವುದು ಮತ್ತು ಹಣದೊಂದಿಗೆ ಅವರು ಮತ್ತೋರ್ವ ಮಧ್ಯವರ್ತಿ ಸಚಿವರ ನಿವಾಸಕ್ಕೆ ತೆರಳಿರುವುದು ಖಾಸಗಿ ವಾಹಿನಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಬಹಿರಂಗವಾಗಿದೆ.
ಸಚಿವರ ನಿವಾಸಕ್ಕೆ ತೆರಳಿದವರ ಪೈಕಿ ಒಬ್ಬರು ಏಳು ಲಕ್ಷ ರೂ ಲಂಚವನ್ನು ಟೇಬಲ್ ಮೇಲಿಡುತ್ತಿರುವ ದೃಶ್ಯ ಪ್ರಕಟವಾಗಿದ್ದು, ಈ ಸಂದರ್ಭದಲ್ಲಿ ಹಸನ್ಮುಖಿಯಾಗಿರುವ ಸಚಿವರ ಪತ್ನಿ ವಿಜಯಾ ಅಲ್ಲಿಗೆ ಬರುತ್ತಿರುವ ದೃಶ್ಯಗಳು ಪ್ರಸಾರವಾಗಿವೆ. ಆದರೆ ಸಚಿವರ ಪತ್ನಿ ಈ ಹಣವನ್ನು ಕೈನಲ್ಲಿ ಮುಟ್ಟಿರುವ ಕುರಿತು ಯಾವ ವಿವರ ಪ್ರಕಟವಾಗಿಲ್ಲ. ಆದರೆ ಎಲ್ಲವೂ ಸಚಿವರ ನಿವಾಸದಲ್ಲೇ ನಡೆಯುತ್ತಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಇಲಾಖೆಯನ್ನು ಪಾರದರ್ಶಕಗೊಳಿಸುವ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವ ವಾಗ್ದಾನ ಮಾಡಿದ್ದ ಸಚಿವರು ಹಾಡಿ ವಾಸ್ತವ್ಯ ಮಾಡಿ ಜನಮನ ಗೆದ್ದಿದ್ದರು. ಆದರೆ ಇದೇ ಇಲಾಖೆಯಲ್ಲಿ ಹಾಸಿಗೆ, ದಿಂಬುಗಳ ಖರೀದಿಯಲ್ಲಿ ಅವ್ಯವಹಾರದ ಬಗ್ಗೆಯೂ ಸುದ್ದಿಗಳು ಕೇಳಿ ಬಂದಿದ್ದವು. ಇದೀಗ ಈ ಪ್ರಕರಣ ನಡೆದಿರುವುದು ಆಂಜನೇಯ ಅವರ ವ್ಯಕ್ತಿತ್ವಕ್ಕೆ ಮಾತ್ರವಲ್ಲದೆ, ಕುರ್ಚಿಗೂ ಸಂಚಕಾರ ತರುವುದರಲ್ಲಿ ಎರಡು ಮಾತಿಲ್ಲ.
ಲಂಚ ಪ್ರಕರಣ: ಸತ್ಯಕ್ಕೆ ದೂರು ಎಂದ ಆಂಜನೇಯ
ಪತ್ನಿ ಲಂಚ ಸ್ವೀಕರಿಸಿದ ಕುರಿತ ಖಾಸಗಿ ವಾಹಿನಿಯೊಂದು ಬಿತ್ತರ ಮಾಡಿರುವ ವರದಿ ಸತ್ಯಕ್ಕೆ ದೂರವಾದದು ಎಂದು ಹೇಳಿರುವ ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್. ಆಂಜನೇಯ ನನ್ನ ಹಾಗೂ ನನ್ನ ಪತ್ನಿಯ ವಿರುದ್ಧ ಪಿತೂರಿ ಸಂಚು ನಡೆಸುವ ಮೂಲಕ ರಾಜಕೀಯವಾಗಿ ತಮ್ಮನ್ನು ಮುಗಿಸುವ ತಂತ್ರ ನಡೆದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ತುಳಿತಕ್ಕೆ ಒಳಗಾದ ಜನರ ಮೇಲೆ ಇಂತಹ ಪಿತೂರಿ ನಡೆಯುತ್ತಲೇ ಇದೆ. ಇದೆಲ್ಲವನ್ನೂ ಎದುರಿಸುವ ಶಕ್ತಿ ತನಗಿದೆ ಎಂದ ಅವರು ನನ್ನ ಕೆಲಸವನ್ನು ಸಹಿಸದ ಕೆಲವರು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಸಿದ್ದಾರೆ ಎಂದರು.
ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದ್ದು ಇದರಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲ. ತಮ್ಮ ನಿವಾಸಕ್ಕೆ ಬೆಳಗ್ಗೆಯಿಂದ ನೂರಾರು ಮಂದಿ ಭೇಟಿ ನೀಡುತ್ತಾರೆ ತಮ್ಮ ಕುಟುಂಬದ ಸಂಪ್ರಾದಯದಂತೆ ತಮ್ಮ ಪತ್ನಿ ಬಂದ ಅತಿಥಿಗಳನ್ನು ಮಾತನಾಡಿಸುವುದು ವಾಡಿಕೆ. ಆದರೆ ಬಂದ ವ್ಯಕ್ತಿ ಗುತ್ತಿಗೆದಾರನಾಗಿದ್ದು, ಆತ ಬಂದದ್ದು ಏಕೆ ಗೊತ್ತಿಲ್ಲ. ಅಲ್ಲದೆ ಮಾತನಾಡುವುದು ಇರಲಿ ಟೇಬಲ್ ಮೇಲೆ ಚೀಟಿಯೊಂದನ್ನು ಬಿಟ್ಟು ಹೋಗಿದ್ದಾನೆ. ಅದರಲ್ಲಿ ಹಣ ಇರಲಿಲ್ಲ ಎಂಬುವುದನ್ನು ವಾಹಿನಿಗಳು ಬಿತ್ತರಿಸಿವೆ. ಈ ಘಟನೆ ಹಿಂದೆ ಕಾಣದ ಕೈ ಕಾರ್ಯ ನಿರ್ವಹಿಸಿದೆ ಎಂಬ ಶಂಕೆ ಇದ್ದು, ಹಿಂದುಳಿದ ವರ್ಗ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ್ ಆ ವ್ಯಕ್ತಿಯನ್ನು ಕರೆತಂದದ್ದು ಏಕೆ ಎಂಬ ಬಗ್ಗೆ ತನಿಖೆ ನಡೆಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ತಮ್ಮ ನಿವಾಸದಲ್ಲಿ ನಡೆದ ಘಟನೆ ಕುರಿತಂತೆ ತಮ್ಮ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದಿದ್ದೇನೆ. ಎಲ್ಲದಕ್ಕೂ ತಕ್ಕ ಉತ್ತರ ನೀಡುವುದಾಗಿ ತಿಳಿಸಿದರು.