ಬೆಂಗಳೂರು: ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ಯೋಜನೆಯ ಟೆಂಡರ್ ನೀಡಲು ಸಮಾಜ ಕಲ್ಯಾಣ ಸಚಿವರ ಪತ್ನಿ ವಿಜಯಾ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಸುರೇಶ್ ಕುಮಾರ್ ನೇತೃತ್ವದ ನಿಯೋಗ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ತಾವು ತಕ್ಷಣವೇ ಮಧ್ಯೆ ಪ್ರವೇಶಿಸಿ ಸಚಿವ ಆಂಜನೇಯ ಅವರನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸೂಚನೆ ನೀಡಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಸಂಪುಟದಿಂದ ಕೈಬಿಡುವಂತೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಸಚಿವ ಆಂಜನೇಯ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಅವರನ್ನು ಆರೋಪದಿಂದ ಮುಕ್ತಗೊಳಿಸಲು ವ್ಯವಸ್ಥಿತಿ ಪ್ರಯತ್ನಗಳು ನಡೆಯುತ್ತಿವೆ. ಆರೋಪ ಕೇಳಿ ಬಂದು ಸಾಕಷ್ಟು ಸಮಯವಾಗಿದ್ದರೂ ಅವರು ಇನ್ನೂ ಸಚಿವರಾಗಿ ಮುಂದುವರೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಮುಖ್ಯಮಂತ್ರಿ ಅವರು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ಸರಿಯಲ್ಲ. ಆಂಜನೇಯ ಅವರು ಸಂಪುಟದಲ್ಲಿ ಮುಂದುವರೆಯಲು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಅದೇ ರೀತಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.ಜೈಲುಗಳಲ್ಲಿ ಸಮಾಜ ಘಾತಕರಿಗೆ ಎಲ್ಲ ಬಗೆಯ ಸವಲತ್ತುಗಳು ಸಿಗುತ್ತಿವೆ.ಹೊರಗೆ ಜನಸಾಮಾನ್ಯರಿಗೆ ನೆಮ್ಮದಿ ಇಲ್ಲವಾಗಿದೆ.ಹೀಗಾಗಿ ಈ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡುವಂತೆ ಕೇಳಿಕೊಂಡಿದೆ.
ಆದರೆ ಬಡ ಮಕ್ಕಳಿಗೆ ಅನ್ನ ನೀಡುವ ಟೆಂಡರ್ ವ್ಯವಹಾರದಲ್ಲೇ ಈ ರೀತಿ ಸಚಿವರ ಪತ್ನಿ ಏಳು ಲಕ್ಷ ರೂಪಾಯಿ ಪಡೆದ ಸಂಗತಿ ಬಹಿರಂಗವಾಗಿದ್ದು, ಇದಕ್ಕೂ ತಮಗೂ ಸಂಬಂಧವಿಲ್ಲ. ಇದು ತಮ್ಮ ವಿರುದ್ಧ ನಡೆಸಲಾಗುತ್ತಿರುವ ಷಡ್ಯಂತ್ರ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಹೇಳುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಭಾಕರ್ ಅವರು ಮಧ್ಯವರ್ತಿಯೊಂದಿಗೆ ಸಚಿವರ ನಿವಾಸಕ್ಕೆ ತೆರಳಿರುವುದು, ಮಧ್ಯವರ್ತಿ ಹಣವನ್ನು ಪಾವತಿಸಿದ ಸಂದರ್ಭದಲ್ಲಿ ಸಚಿವರ ಪತ್ನಿ ಕಣ್ಣೆದುರಿಗೇ ಇರುವುದು ದಾಖಲೆಗಳ ಮೂಲಕ ಬಹಿರಂಗಗೊಂಡಿದೆ.
ಹೀಗಿರುವಾಗ ಈ ಪ್ರಕರಣಕ್ಕೂ, ತಮಗೂ ಸಂಬಂಧವಿಲ್ಲ. ತಮ್ಮ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಸಚಿವ ಆಂಜನೇಯ ಅವರು ಹೇಳುತ್ತಿರುವುದು ಸರಿಯಲ್ಲ. ಘಟನೆ ಬೆಳಕಿಗೆ ಬಂದ ತಕ್ಷಣವೇ ಮುಖ್ಯಮಂತ್ರಿಗಳು ಈ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕಿತ್ತು ಎಂದು ಆಗ್ರಹಿಸಿದ್ದಾರೆ.