ಬೆಂಗಳೂರು: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ನಾನೇ ಬೆಸ್ತ ಸಮುದಾಯದ ಪ್ರಶ್ನಾತೀತ ನಾಯಕ ನಾನು ಕಾಂಗ್ರೆಸ್ ಸರ್ಕಾರ ಅವಧಿ ಮುಗಿಯುವವರೆಗೂ ಮಂತ್ರಿಯಾಗಿರುತ್ತೇನೆ ಎಂದು ಬಂದರು ಮತ್ತು ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಕರ್ನಾಟಕದಲ್ಲಿ 60 ಲಕ್ಷ ಬೆಸ್ತರಿದ್ದಾರೆ. ಈ ಸಮುದಾಯಕ್ಕೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಲೇಬೇಕು. ನನ್ನನ್ನು ಬಿಟ್ಟು ಮಂತ್ರಿಯಾಗಲು ಬೇರೆ ಯಾರಿಲ್ಲ. ನನಗೆ ಅಪ್ಪ ಅಮ್ಮ ಇಲ್ಲ. ಮಕ್ಕಳು ಇಲ್ಲ. ನಾನು ದುಡಿಯುತ್ತಿರುವುದು ಬಡ ಬೆಸ್ತ ಸಮುದಾಯದ ಏಳಿಗೆಗಾಗಿ ಎಂದು ಹೇಳುವ ಮೂಲಕ ಸಂಪುಟದಿಂದ ನನ್ನ ಕೈಬಿಡಬೇಡಿ ಎಂಬ ಸಂದೇಶವನ್ನು ಸಿಎಂಗೆ ರವಾನಿಸಿದ್ದಾರೆ.
ನಮ್ಮದು ದೊಡ್ಡ ಸಮುದಾಯಕ್ಕೆ ಸೇರಿದ ಜನಾಂಗ ಆದ್ದರಿಂದ ಈ ಜನಾಂಗಕ್ಕೆ ನಾನೇ ನಾಯಕ ನನ್ನನ್ನು ಮಂತ್ರಿ ಮಂಡಲದಿಂದ ಹೊರಗಿಡಲು ಸಾಧ್ಯವಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೂ, ಸಿದ್ದರಾಮಯ್ಯ ಸಂಪುಟದಲ್ಲಿ ಬಾಬುರಾವ್ ಚಿಂಚನಸೂರ್ ಮಂತ್ರಿಯಾಗಿರುವುದು ಅಷ್ಟೇ ಸತ್ಯ ಎಂದು ತಮ್ಮದೇ ಧಾಟಿಯಲ್ಲಿ ಪತ್ರಕರ್ತರ ಮುಂದೆ ನುಡಿದಿದ್ದಾರೆ.
ತಾವು ಬೆಸ್ತರ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುವವರೆಗೂ ಸಚಿವನಾಗಿ ಮುಂದುವರೆಯುತ್ತೇನೆ. ಬೆಸ್ತ ಸಮುದಾಯದ ನಾಯಕನಾಗಿರುವ ನಾನು ವಿಧಾನಸಭೆಗೆ ಸತತವಾಗಿ ಐದು ಬಾರಿ ಆಯ್ಕೆಗೊಂಡಿದ್ದೇನೆ.
ಜನಸಾಮಾನ್ಯರ ಸೇವೆ ಮಾಡುವುದೇ ನನ್ನ ಭಾಗ್ಯ. ನನ್ನನ್ನು ಸಂಪುಟದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ನನ್ನ ನಾಯಕರು ಎಂದು ಹೇಳಿದ್ದಾರೆ