ಬೆಂಗಳೂರು: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಇದೇ ಸುದ್ದಿಗಳೇ ತುಂಬಿರುತ್ತವೆ. ಆದ್ದರಿಂದ ಪತ್ರಿಕೆ ಹಾಗೂ ಸುದ್ದಿವಾಹಿನಿಗಳನ್ನು ನಿಷೇಧಿಸಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ವಿಧಾನಸೌಧದಲ್ಲಿ ನಡೆದ ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಾಜ್ಯದಲ್ಲಿ ಹಾಡಹಗಲೇ ಕಳ್ಳರಿಂದ ಪೊಲೀಸರ ಕೊಲೆ ನಡೆದಿದೆ. ಅತ್ಯಾಚಾರ ಎನ್ನುವುದು ಸರಾಗವಾಗಿದೆ. ಇದನ್ನು ಮಟ್ಟ ಹಾಕಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮಾಧ್ಯಮಗಳು ಮತ್ತು ದಿನ ಪತ್ರಿಕೆಗಳ ವಿರುದ್ಧ ಹರಿಹಾಯ್ದ ಈಶ್ವರಪ್ಪ ದಿನಂಪ್ರತಿ ಟಿವಿ ಚಾನೆಲ್, ಪತ್ರಿಕೆಗಳಲ್ಲಿನ ವರದಿ ಕಣ್ಣಲ್ಲಿ ನೋಡಲಾಗ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಟಿವಿ ಚಾನೆಲ್ ಗಳನ್ನು, ದಿನ ಪತ್ರಿಕೆಗಳನ್ನು ಬ್ಯಾನ್ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದರು. ಪತ್ರಿಕೆ ಹಾಗೂ ಮಾಧ್ಯಮಗಳ ಮೇಲೆ ನಿಷೇಧ ಹೇರುವುದರಿಂದ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು. ಈಶ್ವರಪ್ಪ ಅವರ ಈ ಬೇಜವಾಬ್ದಾರಿ ಹೇಳಿಕೆಗೆ ಇದೀಗ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಸರ್ಕಾರವನ್ನು ಟೀಕಿಸುವ ಭರದಲ್ಲಿ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋಧ್ಯಮವನ್ನು ಈಶ್ವರಪ್ಪ ಟೀಕಿಸಿರುವುದು ಖಂಡನೀಯವಾಗಿದೆ.
ಮಾತು ಮುಂದುವರೆಸಿದ ಈಶ್ವರಪ್ಪ, ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದರು. ರಾಜ್ಯ ಸರ್ಕಾರ ರಾಷ್ಟ್ರದ್ರೋಹಿಗಳ ಪರವಾಗಿ ನಿಂತಿದೆ. ಮಡಿಕೇರಿ ಗಲಭೆಗೆ ಸರ್ಕಾರವೇ ಕಾರಣ ಎಂದು ದೂಷಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈಶ್ವರಪ್ಪ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಪತಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.