ಬೆಂಗಳೂರು: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರ ಪದಚ್ಯುತಿ ಪ್ರಕ್ರಿಯೆಗೆ ಈಗ ಆಡಳಿತಾರೂಢ ಕಾಂಗ್ರೆಸ್ ಕೂಡ ಕೈಜೋಡಿಸಲು ನಿರ್ಧರಿಸಿದೆ.
ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಲೋಕಾಯುಕ್ತ ಪದಚ್ಯುತಿ ಸಂಬಂಧ ಪ್ರತಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್ ಸಭಾಪತಿ ಅವರಿಗೆ ಈಗಾಗಲೇ ಅರ್ಜಿಯನ್ನು ನೀಡಿದ್ದು, ಅದು ಶುಕ್ರವಾರ ಪ್ರಸ್ತಾವನೆ ರೂಪದಲ್ಲಿ ಮಂಡನೆಯಾಗಬೇಕಿತ್ತು. ಈ ಕುರಿತು ಗುರುವಾರ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸಭಾಪತಿ ಡಿ.ಎಚ್. ಶಂಕರಮೂರ್ತಿ ಮತ್ತು ಪ್ರತಿಪಕ್ಷಗಳ ನಾಯಕರ ನಡುವೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಶುಕ್ರವಾರ ಆರಂಭಗೊಳ್ಳಬೇಕಿದ್ದ ಲೋಕಾಯುಕ್ತ ಪದಚ್ಯುತಿ ಪ್ರಕ್ರಿಯೆ ಸೋಮವಾರಕ್ಕೆ ಮುಂದೂಡಿಕೆ ಕಂಡಿದೆ. ಕಾಂಗ್ರೆಸ್ ತಾನು ಕೂಡ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೋಮವಾರ ಅರ್ಜಿ ಸಲ್ಲಿಸುವುದಾಗಿ ತಿಳಿಸಿರುವುದರಿಂದ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.