ಬೆಂಗಳೂರು: ಉಪಲೋಕಾಯುಕ್ತ ಸುಭಾಷ್ ಆಡಿ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಇಂದು ಶಾಸಕಾಂಗ ಸಭೆ ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಸಭೆಯಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಖಚಿತ ಎಂದು ಹೇಳಲಾಗಿದೆ.
ಒಂದು ವೇಳೆ ಸುಭಾಷ್ ಆಡಿ ಅವರನ್ನು ಪದಚ್ಯುತಗೊಳಿಸಿದರೆ ಲೋಕಾಯುಕ್ತ ಸಂಸ್ಥೆ ಸಂಪೂರ್ಣವಾಗಿ ನಿಷ್ಕ್ರೀಯವಾಗಲಿದೆ ಎಂದರೆ ತಪ್ಪಾಗಲಾರದು. ಇಡೀ ಲೋಕಾಯುಕ್ತ ಸಂಸ್ಥೆಯನ್ನೇ ಪ್ರಶ್ನಾರ್ಥಕವಾಗಿ ನೋಡುತ್ತಿರುವ ಈ ಸಂದರ್ಭದಲ್ಲಿ ಸುಭಾಷ್ ಆಡಿ ಕೂಡ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದ್ದು, ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಒಂದು ಕಾಲದಲ್ಲಿ ಲೋಕಾಯುಕ್ತ ಸಂಸ್ಥೆ ತನ್ನದೇ ಗೌರವ ಹೊಂದಿತ್ತು. ಜನರು ಕೂಡ ಅಭಿಮಾನ ಪಡುತ್ತಿದ್ದರು. ಆದರೆ ಇದೀಗ ಅದು ಕಳೆದು ಹೋಗಿದ್ದು ಮರು ಪ್ರತಿಷ್ಠಾಪಿಸುವ ಜರೂರಿದೆ ಆದರೆ ರಾಜ್ಯದಲ್ಲಿ ಲೋಕಾಯುಕ್ತರ ನೇಮಕಕ್ಕೆ ಈಗ ನ್ಯಾಯಮೂರ್ತಿಗಳು ದೊರೆಯುತ್ತಿಲ್ಲ. ಮಾನವ ಹಕ್ಕುಗಳ ಆಯೋಗಕ್ಕೂ ಅರ್ಹ ನ್ಯಾಯಮೂರ್ತಿಗಳ ಕೊರತೆ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ಸುಭಾಷ್ ಆಡಿ ಅವರನ್ನು ಪದಚ್ಯುತಿಗೊಳಿಸಿದರೆ ಅರ್ಹರ ಆಯ್ಕೆ ಪ್ರಕ್ರಿಯೆ ನಡೆದು ಅವರು ಅಧಿಕಾರ ಸ್ವೀಕರಿಸುವ ವೇಳೆಗೆ ಸಂಸ್ಥೆ ಪರಿಸ್ಥಿತಿ ಏನಾಗಲಿದೆಯೋ?
ಮಾಹಿತಿ ಹಕ್ಕು ಆಯೋಗಕ್ಕೆ ಮಾಹಿತಿ ಆಯುಕ್ತರ ನೇಮಕ ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಸುಭಾಷ್ ಆಡಿ ಅವರ ಪದಚ್ಯುತಿ ಇದಿಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಶಾಸಕಾಂಗ ಸಭೆಗೆ ಆಗಮಿಸುವಂತೆ ಎಲ್ಲಾ ಶಾಸಕರಿಗೆ ಸೂಚನೆ ನೀಡಲಾಗಿದ್ದು, ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಂಡ ನಂತರವೇ ವಿಧಾನಮಂಡಲದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ಪದಚ್ಯುತಿ ಕುರಿತ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಈ ನಡುವೆ ಸುಭಾಷ್ ಆಡಿ ಅವರ ಪದಚ್ಯುತಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆಗಳು ಕಡಿಮೆ ಇದೆ. ಇನ್ನು ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದ್ದು, ಶಾಸಕಾಂಗ ನಾಯಕ ಎಚ್.ಡಿ. ಕುಮಾರ ಸ್ವಾಮಿ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬುವುದನ್ನು ಕಾದುನೋಡಬೇಕಿದೆ.