ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮತ್ತೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತದ ಪರಿಣಾಮವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ಲಕ್ಷಣವಿದೆ. ಉಡುಪಿ ಜಿಲ್ಲೆಯ ಕೋಟ, ಕಾರ್ಕಳ, ಗದಗ ಜಿಲ್ಲೆಯ ನರಗುಂದ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಹಾಗೂ ಮುದ್ದೇಬಿಹಾಳ, ಹಾಸನ ಜಿಲ್ಲೆಯ ಬೇಲೂರು, ದುದ್ದ, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಭಾನುವಾರ 2 ಸೆಂಟೀ ಮೀಟರ್ ಮಳೆಯಾಗಿದೆ.
ಯರವಾಡ, ಬಾಗಲಕೋಟೆ, ವಿಜಯಪುರ, ಆಲಮಟ್ಟಿ, ಇಳಕಲ್ಲ, ರಾಯಚೂರು ಜಾಲಹಳ್ಳಿ, ತ್ಯಾಗತರ್ಿ, ಚಿಕ್ಕಮಗಳೂರು, ಕಡೂರು, ಸಂತೇಬೆನ್ನೂರು, ಗೌರಿಬಿದನೂರು ಹಾಗೂ ಗುಡಿಬಂಡೆಯಲ್ಲಿ ತಲಾ ಒಂದು ಸೆಂಟಿಮೀಟರ್ ಮಳೆಯಾಗಿದೆ.
ಮುನ್ಸೂಚನೆಯಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆ ನಿರೀಕ್ಷಿತ. ಬೆಂಗಳೂರು ಮತ್ತು ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು, ಇನ್ನೂ 2 ದಿನ ಭಾರಿ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ವೀಕೆಂಡ್ ಮೂಡ್ನಲ್ಲಿದ್ದ ಜನರ ಸಂಭ್ರಮಕ್ಕೆ ತಣ್ಣೀರು ಎರಚಿದಂತಾಯಿತು. ಪ್ರತಿದಿನ ಸಂಜೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ದಸರಾ ವಸ್ತುಪ್ರದರ್ಶನ, ಸರ್ಕಸ್ ಮುಂತಾದ ಕಡೆಗಳಲ್ಲಿ ಜನ ಧಾವಿಸದೆ ನಷ್ಟ ಅನುಭವಿಸುವಂತಾಗಿದೆ.