ಬೆಂಗಳೂರು: ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಿ ಮಾರ್ಚ್ ಹದಿನಾರರೊಳಗೆ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಭರವಸೆಯನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ನೀಡಿದ್ದಾರೆ.
ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಸ್ತಾಪಕ್ಕೆ ಈ ಉತ್ತರ ನೀಡಿರುವ ಸಚಿವರು ನಗರ ಪ್ರದೇಶಗಳಲ್ಲಿ ಆಕ್ರಮವಾಗಿ ಕಟ್ಟಿಕೊಂಡಿರುವ ಮನೆಗಳನ್ನು 94 (ಸಿ) (ಸಿ) ಅಡಿ ಸಕ್ರಮಗೊಳಿಸಲಾಗುವುದು, ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು 94 (ಸಿ) ಅಡಿ ಸಕ್ರಮಗೊಳಿಸಲಾಗುವುದು ಎಂದು ಹೇಳಿದರು.
ಈ ಮನೆಗಳನ್ನು ಸಕ್ರಮಗೊಳಿಸಲು ಕೋರಿ ಅರ್ಜಿ ಸಲ್ಲಿಸಲು ಪ್ರಸಕ್ತ ವರ್ಷದ ಡಿಸೆಂಬರ್ ತನಕ ಅವಕಾಶವಿದ್ದು, ಈಗಾಗಲೇ ಮೂರೂವರೆ ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಆದರೆ ಜನರಲ್ಲಿ ಅರ್ಜಿ ಸಲ್ಲಿಸುವ ಕುರಿತು ಜಾಗೃತಿ ಮೂಡಿಸಲು ಪ್ರತಿಯೋರ್ವ ಶಾಸಕರೂ ಯತ್ನಿಸಬೇಕು ಎಂದು ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವುದು ಸರ್ಕಾರದ ಬದ್ದತೆ. ಹೀಗಾಗಿ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ವಿಷಯದಲ್ಲಿ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಮೊದಲು ಅರ್ಜಿಗಳು ಸಲ್ಲಿಕೆಯಾಗಲಿ. ನಾವು ನಿಗದಿತ ಕಾಲಕ್ಕೆ ಹಕ್ಕು ಪತ್ರಗಳನ್ನು ನೀಡುವುದಾಗಿ ಅವರು ಹೇಳಿದರು.
ಒಂದು ವೇಳೆ ಅರ್ಜಿ ಸಲ್ಲಿಕೆಗೂ ಕಾಲಾವಕಾಶ ಹೆಚ್ಚಳ ಮಾಡಬೇಕು ಎಂಬ ಅಭಿಪ್ರಾಯವಿದ್ದರೂ ತಕ್ಷಣವೇ ಆ ಕೆಲಸ ಮಾಡಲು ನಾವು ಸಿದ್ದರಿಲ್ಲ ಹೀಗಾಗಿ ಮುಂದೆ ಅಗತ್ಯ ಬಿದ್ದರೆ ಅದನ್ನು ನೋಡೋಣ ಎಂದು ಅವರು ಹೇಳಿದರು.