ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ರಾವ್ ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್ ಕಾಂಗ್ರೆಸ್ ಪಕ್ಷ ಉಪ ಲೋಕಾಯುಕ್ತರ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುವ ಹಿಂದೆ ಷಡ್ಯಂತ್ರ ಅಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕಾಯುಕ್ತ ಭಾಸ್ಕರ್ ರಾವ್ ನಡುವೆ ಪರಸ್ಪರ ರಕ್ಷಣೆ ಮಾಡಿಕೊಳ್ಳುವ ಒಡಂಬಡಿಕೆ ಇದೆ ಎನ್ನುವ ಅನುಮಾನ ಸಾಬೀತಾಗಿದೆ. ನಾವು ಮೊದಲಿನಿಂದಲೂ ಈ ಇಬ್ಬರ ನಡುವೆ ಒಪ್ಪಂದ ಆಗಿದೆ ಎಂದು ಆರೋಪಿಸುತ್ತಿದ್ದೆವು. ಇವರು ಭ್ರಷ್ಟರನ್ನು ರಕ್ಷಿಸಲು ಹೊರಟಿದ್ದಾರೆ. ಉಪ ಲೋಕಾಯುಕ್ತರ ಪದಚ್ಯುತಿ ಪ್ರಸ್ತಾಪಕ್ಕೆ ಸಭಾಧ್ಯಕ್ಷರು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿರು.
ಇದು ಸರ್ಕಾರದ ತೀರ್ಮಾನವೋ, ಪಕ್ಷದ ನಿರ್ಧಾರವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕಾನೂನು ಸಚಿವರು ಈ ಪ್ರಸ್ತಾವನೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಲೋಕಾಯುಕ್ತ ವ್ಯವಸ್ಥೆಯನ್ನು ಮುಚ್ಚಿಹಾಕುವ ಮೂಲಕ ಭ್ರಷ್ಟ ಅಧಿಕಾರಿಗಳು ಹಾಗೂ ಸಚಿವರನ್ನು ರಕ್ಷಿಸುವ ಷಡ್ಯಂತ್ರ ನಡೆಸಲಾಗಿದೆ ಎಂದು ದೂರಿದರು.