ಬೆಂಗಳೂರು: ಸರ್ಕಾರ ಉಪಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ತಂತ್ರ ನಡೆಸುತ್ತಿದ್ದ ಬೆನ್ನಲ್ಲೇ ಮಾಧ್ಯಮದ ಮುಂದೆ ಬಂದಿರುವ ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ.ಅಡಿ ಅವರು ನನ್ನ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿವೃತ್ತ ಉಪಲೋಕಾಯುಕ್ತ ಮಜಗೆ ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಮತ್ತು ಕೈ ಶಾಸಕರು ತಮ್ಮ ಪದಚ್ಯುತಿಗೆ ಯಾವ ಆಧಾರದ ಮೇಲೆ ಸಹಿ ಸಂಗ್ರಹ ಮಾಡುತ್ತಿದ್ದಾರೆ ಎಂಬ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದೂ ಇಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹುಬ್ಬಳ್ಳಿ ಮೂಲದ ವೈದ್ಯೆ ಡಾ.ಶೀಲಾ ಪ್ರಕರಣದ ಕೇಸ್ ನನ್ನ ಬಳಿಗೆ ಬಂದಿದ್ದರಿಂದ ಅದರ ಕಡತ ಪರಿಶೀಲಿಸಲಾಯಿತೆ ಹೊರತು ನಾನು ಮಜಗೆ ಅವರ ಕಾರ್ಯ ವ್ಯಾಪ್ತಿಯೊಳಗೆ ಮೂಗು ತೂರಿಸಿಲ್ಲ. ನನ್ನ ಅಳಿಯನ ವಿರುದ್ಧ 2012ರಲ್ಲಿ ಖಾಸಗಿ ದೂರು ದಾಖಲಾಗಿತ್ತು. ಆ ಸಂದರ್ಭದಲ್ಲಿ ನಾನು ನ್ಯಾಯಮೂರ್ತಿ ಸ್ಥಾನದಲ್ಲಿದ್ದೆ. ಆದರೂ ಪೊಲೀಸ್ ತನಿಖೆಯಲ್ಲಿ ಮಧ್ಯ ಪ್ರವೇಶಿಸಿರಲಿಲ್ಲ. ತಮ್ಮ ವಿರುದ್ಧದ ಖಾಸಗಿ ದೂರಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನನ್ನ ಅಳಿಯ ಇಡೀ ಪ್ರಕರಣದಿಂದ ದೋಷಮುಕ್ತ ಹೊಂದಿದ್ದರು. ಆ ಸಂದರ್ಭದಲ್ಲಿ ನನ್ನ ಹೆಸರು ಉಪಲೋಕಾಯುಕ್ತಕ್ಕೆ ಪ್ರಸ್ತಾವನೆಗೊಂಡಿರಲಿಲ್ಲ.
ನನ್ನ ಅಳಿಯ ದೋಷಮುಕ್ತಗೊಂಡ ನಂತರ ನಾನು ಉಪಲೋಕಾಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದೆ. ಹೀಗಾಗಿ ನಾನು ಯಾವುದೇ ತಪ್ಪು ಮಾಡಿಲ್ಲ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದೂ ಇಲ್ಲ ಎಂದರಲ್ಲದೆ ಎಲ್ಲದಕ್ಕೂ ಕಾನೂನು ಮೂಲಕ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.