ಬೆಂಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 27 ರಂದು ಸ್ಥಳೀಯ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ 108454 ಮತದಾರರು ಮತದಾನ ಮಾಡಲಿದ್ದಾರೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹತ್ತು ನಗರ ಪಾಲಿಕೆ ಸೇರಿದಂತೆ 6516 ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ 10 ನಗರ ಪಾಲಿಕೆ, 30 ಜಿ.ಪಂ, 176 ತಾಪಂ, 6081 ಗ್ರಾಪಂ, 57 ನಗರ ಸಭೆ, 94 ಪಟ್ಟಣ ಪಂಚಾಯಿತಿಗಳ ಜನಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ.
ಆದ್ಯತಾ ಮತಗಳ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶವಿರುವುದರಿಂದ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಸುವುದಿಲ್ಲ. ಅಷ್ಟೇ ಅಲ್ಲ ಚಿಹ್ನೆಯು ಇರುವುದಿಲ್ಲ. ಆಯಾ ಪಕ್ಷಗಳ ಹೆಸರನ್ನು ಮತಪಟ್ಟಿಯಲ್ಲಿ ನಮೂದಿಸಲಾಗುವುದು ಎಂದರು. ಮತದಾನ ಮಾಡುವ ಸದಸ್ಯರು ಅಭ್ಯರ್ಥಿಗಳ ಮುಂದೆ ಅಂಕಿಯಲ್ಲಿ ನಮೂದಿಸಬೇಕೇ ಹೊರತು. ಇಂಕ್ ಮೂಲಕ ಮುದ್ರೆ ಒತ್ತುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಮಪತ್ರ ಸಲ್ಲಿಸಲು ಡಿಸೆಂಬರ್ 9 ಕಡೇ ದಿನವಾಗಿದ್ದು, 10 ರಂದು ಪರಿಶೀಲನೆ ನಡೆಯಲಿದೆ. ಅಗತ್ಯ ಕಂಡರೆ 27 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30 ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದರು. ಚುನಾವಣಾ ಕಣಕ್ಕೀಳಿಯುವ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ ಮಿತಿ ಇರುವುದಿಲ್ಲ. ಅವರು ವೆಚ್ಚದ ಮಿತಿಯನ್ನು ಆಯೋಗಕ್ಕೆ ನೀಡುವಂತೆಯೂ ಇಲ್ಲ ಎಂದು ಹೇಳಿದರು.